ಮೂಡುಬಿದಿರೆ: ಜಿಲ್ಲೆಯನ್ನು ಹಸಿರು ದಕ್ಷಿಣ ಕನ್ನಡವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಯುವಜನತೆ ತಾಯಿಯ ಹೆಸರಿನಲ್ಲಿ ದೇವಸ್ಥಾನ, ದೈವಸ್ಥಾನ ಹಾಗೂ ಮನೆಗಳ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು ಎಂದು ಮಂಗಳೂರು ಸಂಸದ ಬ್ರಿಜೇಶ್ ಚೌಟ ಹೇಳಿದರು.
‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಅಂಗವಾಗಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಯಿ ನಮ್ಮನ್ನು ಪ್ರೀತಿ, ಕಾಳಜಿ ಮತ್ತು ತ್ಯಾಗದ ಮೂಲಕ ಪೋಷಿಸುವಂತೆ ನಾವು ಕೂಡ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯ ಎಂದು ಬ್ರಿಜೇಶ್ ಚೌಟ ಹೇಳಿದರು.
ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ., ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಸಹಕಾರಿ ಧುರೀಣ ದಯಾನಂದ ಪೈ, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಉಪಾಧ್ಯಕ್ಷ ಸಚಿನ್ ಪಣಪಿಲ, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ ಅಂಚನ್, ಉಪವಲಯ ಅರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರಾದ ಶಂಕರ ಗೌಡ ಹಾಗೂ ಸಂದೇಶ್ ಮತ್ತು ದೇವಸ್ಥಾನದ ವ್ಯವಸ್ಥಾಪಕ ಉದಯಕುಮಾರ್ ಉಪಸ್ಥಿತರಿದ್ದರು.