ಮೂಡುಬಿದಿರೆ: ಗೃಹಲಕ್ಷ್ಮಿ ಸೇರಿದಂತೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಕೊಡುಗೆ ನೀಡಿದ್ದು, ಜನರ ಬದುಕಿಗೆ ನೇರವಾಗಿ ಸ್ಪಂದಿಸುವ ಕೆಲಸ ಮಾಡಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಮೂಡುಬಿದಿರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಳ್ವಾಸ್ ಮಂಗಳೂರು, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮೂಡುಬಿದಿರೆ, ಗ್ರಾಮ ಸ್ವರಾಜ್ಯ ಪ್ರತಿಷ್ಠಾನ ದಕ್ಷಿಣ ಕನ್ನಡ ಹಾಗೂ ಬಿಲ್ಲವ ಸಂಘ ಇರುವೈಲು ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಹಾಗೂ ‘ಗೃಹಲಕ್ಷ್ಮಿ ಕೋಟಿ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆ.ಎಂ.ಎಫ್ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಿದರೆ ರಾಜಕೀಯ ನಾಯಕರಿಗೆ ಉತ್ತಮ ಭವಿಷ್ಯ ಸಾಧ್ಯ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಆಶಾಕಿರಣವಾಗಿವೆ ಎಂದರು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸಹಕಾರದಿಂದ ಎರಡು ತಿಂಗಳೊಳಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕವಾಗುವ ನಿರೀಕ್ಷೆ ಇದೆ ಎಂದರು. ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಅಧ್ಯಕ್ಷ ಸುಭಾಸ್ ಚಂದ್ರ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಇರುವೈಲು ಕುಮಾರ್ ಪೂಜಾರಿ, ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, 300ಕ್ಕೂ ಹೆಚ್ಚು ಫಲಾನುಭವಿಗಳು ಉಪಸ್ಥಿತರಿದ್ದರು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಅದೃಷ್ಟ ಚೀಟಿ ನಡೆಸಿ 10 ಮಂದಿಗೆ ಸೀರೆಗಳನ್ನು ಬಹುಮಾನವಾಗಿ ವಿತರಿಸಲಾಯಿತು. 200ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜೈಸನ್ ಪಿರೇರಾ ತಾಕೋಡಿ ಸ್ವಾಗತಿಸಿದರು. ಅರುಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಯಾರಿಯೋ ಡಿಸೋಜ ವಂದಿಸಿದರು.