ಮೂಡುಬಿದಿರೆ: ಜಾಗತಿಕ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಕೃಷಿ ವಲಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದೆ. ತೈಲ ಬೆಲೆ ಏರಿಕೆಯಿಂದಾಗಿ ಕೃಷಿ ವೆಚ್ಚ ದುಬಾರಿಯಾಗಿದ್ದು, ಕೃಷಿಕರು ಭಾರಿ ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳು ಹಾಗೂ ಕೃಷಿ ಸರಕು ಸಾಗಣೆ ವಾಹನಗಳಿಗೆ ಸರ್ಕಾರ ಡೀಸೆಲ್ ಸಬ್ಸಿಡಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ. ಪ್ರಸ್ತುತ ದಿನಗಳಲ್ಲಿ ಗದ್ದೆ ಉಳುಮೆ, ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆ ಹಾಗೂ ಕಳೆನಾಶಕ ಸಿಂಪಡಣೆ ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಕೆಲಸಗಳು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಯಂತ್ರಗಳನ್ನೇ ಅವಲಂಬಿಸಿವೆ. ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಕಾಡುತ್ತಿರುವ ಕೂಲಿಯಾಳುಗಳ ಕೊರತೆಯಿಂದಾಗಿ ರೈತರು ಅನಿವಾರ್ಯವಾಗಿ ಯಾಂತ್ರಿಕ ಕೃಷಿಯತ್ತ ಗಮನ ಹರಿಸಿದ್ದರು. ಆದರೆ ಈಗ ಇಂಧನ ಬೆಲೆ ಗಗನಕ್ಕೇರಿರುವುದರಿಂದ ಯಂತ್ರಗಳ ಬಳಕೆಯೂ ಕೃಷಿಕರಿಗೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದೆ. ಇದಲ್ಲದೆ, ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ವಾಹನಗಳ ಬಾಡಿಗೆಯೂ ದುಬಾರಿಯಾಗಿದೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕೃಷಿ ಯಂತ್ರೋಪಕರಣ ಮತ್ತು ವಾಹನಗಳಿಗೆ ತಕ್ಷಣವೇ ಡೀಸೆಲ್ ಸಬ್ಸಿಡಿ ಘೋಷಿಸಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶೀಘ್ರದಲ್ಲೇ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ವಲಯಕ್ಕೆ ತೈಲ ಬೆಲೆ ಏರಿಕೆ ಬರೆ: ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಆಗ್ರಹ-ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ರೈತ ಸಂಘ ನಿರ್ಧಾರ
ಕೃಷಿ ವಲಯಕ್ಕೆ ತೈಲ ಬೆಲೆ ಏರಿಕೆ ಬರೆ: ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಆಗ್ರಹ-ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ರೈತ ಸಂಘ ನಿರ್ಧಾರ