ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 5ರಂದು ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಮಂಗಳೂರು ವಲಯದ ಅರಣ್ಯಾಧಿಕಾರಿ ಜಯಪ್ರಕಾಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಪ್ರಕಾಶ್, ಪರಿಸರವು ಮಾನವನ ಮೂಲಭೂತ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಮರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯ ವತಿಯಿಂದ ಶಾಲೆಗಳು ಹಾಗೂ ಗ್ರಾಮಗಳಲ್ಲಿ ಸಸಿ ನೆಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರ ಸಂರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು. ಪರಿಸರದ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸಸಿ ನೆಡಲು ಉಚಿತವಾಗಿ ಸಸಿಗಳನ್ನು ನೀಡುವುದಾಗಿ ಅವರು ಹೇಳಿದರು.
ಮಂಗಳೂರು ವಲಯದ ಉಪ ಅರಣ್ಯಾಧಿಕಾರಿ ಆನಂದ್ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ತುಳುನಾಡಿನ ಆಟಿ ಅಮವಾಸ್ಯೆ, ಕೆಡ್ಡಸ, ತೆನೆ ಹಬ್ಬ ಹಾಗೂ ಬಲಿ ಪಾಡ್ಯಮಿ ಸೇರಿದಂತೆ ಹಲವು ಸಾಂಪ್ರದಾಯಿಕ ಆಚರಣೆಗಳು ಪ್ರಕೃತಿಯ ಆರಾಧನೆಗೆ ಮಹತ್ವ ನೀಡುತ್ತವೆ ಎಂದು ವಿವರಿಸಿದರು. ನಾಗಬನ ಹಾಗೂ ದೈವದ ಗರಡಿಗಳ ನಿರ್ಮಾಣ ಮತ್ತು ವಿಶೇಷ ಸಸಿಗಳ ನೆಡುವ ಪರಂಪರೆಯ ಹಿಂದೆ ಪರಿಸರ ಕಾಳಜಿ ಅಡಕವಾಗಿದೆ ಎಂದರು.
ಟ್ರಸ್ಟ್ ಸದಸ್ಯ ಮಂಜುನಾಥ ಶೆಟ್ಟಿ ಭಾರತೀಯ ಸಂಸ್ಕೃತಿಯಲ್ಲಿ ಪರಿಸರದ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆಯಿಂದ ನೀಡಲಾದ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಈ ವೇಳೆ ಮರಗಳು ಪರಿಸರ ಸಂರಕ್ಷಣೆಗೆ ನೀಡುವ ಕೊಡುಗೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಶಿಕ್ಷಕ-ಶಿಕ್ಷಕಿಯರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.