ಮೂಡುಬಿದಿರೆ: ಪ್ರಕೃತಿಯ ಸಂಪನ್ಮೂಲಗಳನ್ನು ನಿರಂತರವಾಗಿ ಬಳಸುತ್ತಿರುವ ಮಾನವ, ಅವುಗಳಿಗೆ ಪ್ರತಿಯಾಗಿ ಪ್ರಕೃತಿಯ ಋಣ ತೀರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ‘ಗ್ರೀನ್ ಹೀರೋ ಆಫ್ ಇಂಡಿಯಾ’ ಖ್ಯಾತಿಯ ಆರ್.ಕೆ. ನಾಯರ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ‘ಮೈ ಪ್ಲಾನೆಟ್, ಮೈ ಪ್ರೈಡ್’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷಾ ವೈವಿಧ್ಯತೆ ಮತ್ತು ಜೀವ ವೈವಿಧ್ಯತೆ ಪರಸ್ಪರ ಅವಲಂಬನೆಯ ಸಂಕೇತವಾಗಿದ್ದು, ಗಾಳಿ, ನೀರು, ಬೆಟ್ಟ, ನದಿ, ಕಾಡು ಸೇರಿದಂತೆ ಪ್ರಕೃತಿಯ ಎಲ್ಲ ಸಂಪನ್ಮೂಲಗಳು ಮಾನವನ ಸೃಷ್ಟಿಯಲ್ಲ ಎಂದು ಹೇಳಿದರು. ಮಿಯಾವಾಕಿ ಮಾದರಿಯ ಅರಣ್ಯಗಳನ್ನು ಸಮುದ್ರ ತೀರದ ಉಪ್ಪುಮಣ್ಣಿನ ಪ್ರದೇಶಗಳಲ್ಲಿಯೂ ಯಶಸ್ವಿಯಾಗಿ ನಿರ್ಮಿಸಿರುವ ಅನುಭವವನ್ನು ಹಂಚಿಕೊಂಡ ಅವರು, ಗುಜರಾತಿನ ಸ್ಮೃತಿವನ ಯೋಜನೆ ಪರಿಸರ ಪುನಶ್ಚೇತನದ ಯಶಸ್ವಿ ಮಾದರಿಯಾಗಿದೆ ಎಂದರು. ಪರಿಸರ ಸಂರಕ್ಷಣೆ ಸರ್ಕಾರ ಅಥವಾ ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ, ನಾಗರಿಕ ಪ್ರಜ್ಞೆ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕ್ ಆಳ್ವ ಮಾತನಾಡಿ, ಪರಿಸರ ಸಂರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಗ್ರೀನ್ ವಾರಿಯರ್ಸ್‌ಗಳನ್ನು ಸಮಾಜ ಗೌರವಿಸಬೇಕು. ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರದಂತಹ ಪ್ರಕೃತಿ ಸಂಪತ್ತನ್ನು ಹೊಂದಿರುವ ಕರಾವಳಿ ಕರ್ನಾಟಕದ ಜನರು ಅದೃಷ್ಟವಂತರಾಗಿದ್ದು, ಈ ಸಂಪತ್ತನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಜಾತಿ, ಧರ್ಮದ ವಿಚಾರಗಳ ನಡುವೆ ಪರಿಸರದ ಧ್ವನಿ ಹಿಂಬದಿಗೆ ಸರಿಯುತ್ತಿರುವುದು ವಿಷಾದನೀಯ ಎಂದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ರೊರ‍್ಯಾಕ್ಟ್ ಸೌತ್ ಏಷ್ಯಾ ಅಧ್ಯಕ್ಷ ಡ್ಯಾರಲ್ ಡಿಸೋಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಡಿಸಿ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಸಂಯೋಜಕ ವೇಣುರಾವ್‌ದೇವಾ, ಡಾ. ರುಚಿಕಾ ಉಪಸ್ಥಿತರಿದ್ದರು. ವಿತುಲಾ ಜೈನ್ ಸ್ವಾಗತಿಸಿದರು. ತೃಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಿಜಾರಿನ ಆಳ್ವಾಸ್ ಕ್ಯಾಂಪಸ್‌ನ ಹರೀಶ್ ಭಟ್ ವನದಲ್ಲಿ ಔಷಧೀಯ ಸಸ್ಯಗಳ ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು.