ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮೂಡುಬಿದಿರೆಯ ಸಮಗಾರಗುಂಡಿ ರಸ್ತೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಗಾರಗುಂಡಿ ಬಾಂಬೆ ಶಾಂತ್ ಡ್ರೈ ಕ್ಲೀನ್ ಶಾಪ್ ಎದುರು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ, ಜೋರು ಮಳೆ ಬಂದಾಗ ಹಾಗೂ ಮಳೆ ನಿಂತ ಮೇಲೂ ರಸ್ತೆಯಲ್ಲಿ ನೀರು ನಿಂತು ಈಜುಕೊಳದಂತಾಗುತ್ತಿದೆ. ರಸ್ತೆಯ ಮೇಲ್ಭಾಗದ ಏರು ರಸ್ತೆ ಹರಿದು ಬರುವ ಮಳೆನೀರೆಲ್ಲವೂ ಸತೀಶ್ ಸಮಗಾರಗುಂಡಿ ಅವರ ಬಂಗೇರ ನಿವಾಸದ ಎದುರು ಸಂಗ್ರಹಗೊಳ್ಳುತ್ತಿದ್ದು, ರಸ್ತೆಯು ಕಂಬಳದ ಗದ್ದೆಯಂತೆ ಮಾರ್ಪಟ್ಟಿದೆ.
ರಸ್ತೆಯುದ್ದಕ್ಕೂ ಮಳೆನೀರು ಆವರಿಸಿರುವುದರಿಂದ ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿದೆ.
ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟಲು ಮತ್ತು ನಡೆದುಕೊಂಡು ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆಯೇ ಪುರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸತೀಶ್ ಸಮಗಾರಗುಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಸಂಕಷ್ಟಕ್ಕೆ ಪುರಸಭೆ ತಕ್ಷಣ ಸ್ಪಂದಿಸಿ, ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಜು ಕೊಳವಾದ ಹೆದ್ದಾರಿ-ಮೂಡುಬಿದಿರೆ ಸಮಗಾರಗುಂಡಿ ರಸ್ತೆ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ
ಈಜು ಕೊಳವಾದ ಹೆದ್ದಾರಿ-ಮೂಡುಬಿದಿರೆ ಸಮಗಾರಗುಂಡಿ ರಸ್ತೆ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ