ಮೂಡುಬಿದಿರೆ: ಯುವ ಲೇಖಕಿ ಲ್, ವಾಗ್ಮಿ ರಿಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಜಿಲ್ಲಾಧ್ಯಕ್ಷ ಹಾಗೂ ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಕರ್ನಾಟಕ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಪ್ಪಿ, ಶಾಂತಲಾ ಹಾಗೂ ವಿಜಯಲಕ್ಷ್ಮಿ ನೇತೃತ್ವದಲ್ಲಿ ರಿಶೆಲ್ ಫೆರ್ನಾಂಡಿಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ರಿಶೆಲ್ ಫೆರ್ನಾಂಡಿಸ್ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಗುರುತಿಸಿಕೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, ಪ್ರಧಾನಮಂತ್ರಿ ಸಂಗ್ರಾಲಯದ ರಾಷ್ಟ್ರೀಯ ಐಕಾನ್ ಪ್ರಶಸ್ತಿ ಹಾಗೂ ಭಾರತ್ ಮಂಟಪಂನಲ್ಲಿ ಪ್ರದಾನವಾದ ಜೆ ಮೌರಸ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ರಿಶೆಲ್ ಫೆರ್ನಾಂಡಿಸ್ ಐದು ಪುಸ್ತಕಗಳನ್ನು ರಚಿಸಿದ್ದಾರೆ. ‘ಭಾರತ್ @ 2047ರಲ್ಲಿ ಯುವಕರ ಪಾತ್ರ’, ‘ಸುರಾಜ್ಯ’, ‘ಉತ್ತಮ ಆಡಳಿತ’, ‘ಚಕ್ರ ಪ್ರಜಾಪ್ರಭುತ್ವ’ ಸೇರಿದಂತೆ ಹಲವು ಕೃತಿಗಳು ಗಮನ ಸೆಳೆದಿವೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಿತ ಕೃತಿಯನ್ನೂ ಅವರು ಪ್ರಕಟಿಸಿದ್ದಾರೆ. ದಿಶಾ ಭಾರತ್, ಸಮರ್ಥ ಭಾರತ ಚಿಂತಕರ ವೇದಿಕೆ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯ ಸ್ವಯಂಸೇವಕರಾಗಿರುವ ರಿಶೆಲ್ ಫೆರ್ನಾಂಡಿಸ್, ಡಿಆರ್‌ಡಿಸಿ ಗ್ಲೋಬಲ್‌ನ ಅಂತರರಾಷ್ಟ್ರೀಯ ಸದಸ್ಯೆಯಾಗಿದ್ದಾರೆ. ಯುವ ಸಬಲೀಕರಣ, ಮಹಿಳಾ ಅಭಿವೃದ್ಧಿ ಹಾಗೂ 21ನೇ ಶತಮಾನದ ಸವಾಲುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಿಶೆಲ್ ಫೆರ್ನಾಂಡಿಸ್ ಅವರ ಸಾಧನೆಗಳನ್ನು ಕೇಂದ್ರ ಸಚಿವರು, ಭಾರತದ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.