ಕುಪ್ಪೆಪದವು: ಸುಮಾರು 66 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕುಪ್ಪೆಪದವು ಸಮೀಪದ ಕಲ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಸಂಪೂರ್ಣ ಜರ್ಜರಿತಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿದ್ಯಾಭ್ಯಾಸ ಎರಡಕ್ಕೂ ಆತಂಕ ತಂದೊಡ್ಡಿದೆ. ಕಟ್ಟಡ ಬಳಕೆಗೆ ಯೋಗ್ಯವಲ್ಲದ ಕಾರಣ ಶಿಕ್ಷಕರು ಅನಿವಾರ್ಯವಾಗಿ ಎರಡೆರಡು ತರಗತಿಗಳನ್ನು ಒಟ್ಟುಗೂಡಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡ ಮೂರು ನೂತನ ಕೊಠಡಿಗಳಲ್ಲಿಯೇ ಸದ್ಯ 1ರಿಂದ 7ನೇ ತರಗತಿ ವರೆಗಿನ 42 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 1 ರಿಂದ 3ನೇ ತರಗತಿ, ಮತ್ತೊಂದರಲ್ಲಿ 4 ಮತ್ತು 5ನೇ ತರಗತಿ, ಇನ್ನೊಂದರಲ್ಲಿ 6 ಮತ್ತು 7ನೇ ತರಗತಿಗಳನ್ನು ಒಟ್ಟಿಗೆ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚಿದ ಆತಂಕ: ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಶಾಲೆಯ ಆವರಣದ ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ. ಗೋಡೆ ಕುಸಿದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಳೆಯ ಕಟ್ಟಡದ ಹೆಂಚುಗಳು ಮತ್ತು ಪಕ್ಕಾಸುಗಳು ಕೂಡ ಬೀಳುವ ಸ್ಥಿತಿಯಲ್ಲಿದ್ದು, ತಕ್ಷಣದ ದುರಸ್ತಿ ಅಗತ್ಯವಾಗಿದೆ. ಸ್ಥಳೀಯರ ಪ್ರಕಾರ, ಕಬ್ಬಿಣದ ಸರಳುಗಳ ಸಹಾಯದಿಂದ ಕಟ್ಟಡವನ್ನು ಪುನರ್‌ಬಲಪಡಿಸಿದರೆ ಇನ್ನೂ 5ರಿಂದ 10 ವರ್ಷ ಸುರಕ್ಷಿತವಾಗಿ ಬಳಸಬಹುದಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಸ್ಪಂದನೆ ದೊರಕಿಲ್ಲ.

ಕಾರ್ಯಕ್ರಮಗಳಿಗೂ ಇಲ್ಲ ಸ್ಥಳಾವಕಾಶ: ಶಾಲೆಯಲ್ಲಿ ಪೋಷಕರ ಸಭೆ ಅಥವಾ ಸರಕಾರಿ ಕಾರ್ಯಕ್ರಮಗಳನ್ನು ನಡೆಸಬೇಕಾದರೂ ಸೂಕ್ತ ಸ್ಥಳಾವಕಾಶವಿಲ್ಲ. ವಿದ್ಯಾರ್ಥಿಗಳನ್ನು ಅಂಗಳದಲ್ಲೇ ಕೂರಿಸಿ ಕಾರ್ಯಕ್ರಮ ನಡೆಸಬೇಕಾದ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿ ಬಿಸಿಲು ಹಾಗೂ ಮಳೆಗಾಲದಲ್ಲಿ ಮಳೆಯ ನಡುವೆಯೇ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತಿದೆ. ಶಾಲೆಯ ಹಿಂಭಾಗದಲ್ಲಿರುವ ಒಂದು ಕೊಠಡಿಗೆ ತೆರಳಲು ಅಪಾಯಕಾರಿ ಹಳೆಯ ಕಟ್ಟಡದ ಮೂಲಕವೇ ಸಾಗಬೇಕಾಗಿರುವುದರಿಂದ ಅದನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಅಪಾಯಕಾರಿಯಾದ ಕಟ್ಟಡಗಳನ್ನು ಬಳಸಬಾರದು ಎಂಬ ನಿಯಮ ಇರುವುದರಿಂದ ಶಿಕ್ಷಕರು ಕಿರಿದಾದ ಮೂರು ಕೊಠಡಿಗಳಲ್ಲೇ ಎಲ್ಲ ವಿದ್ಯಾರ್ಥಿಗಳನ್ನು ಕೂರಿಸುತ್ತಿದ್ದಾರೆ.

ಸುರಕ್ಷತೆ ಪ್ರಶ್ನೆ: ಶಾಲೆಯ ಮುಖ್ಯ ಗೇಟು ಕುಸಿದು ಬಿದ್ದಿರುವುದರಿಂದ ದನ, ನಾಯಿ ಸೇರಿದಂತೆ ಸಾಕು ಹಾಗೂ ಬೀದಿ ಪ್ರಾಣಿಗಳು ಸುಲಭವಾಗಿ ಶಾಲಾ ಆವರಣ ಪ್ರವೇಶಿಸುತ್ತಿವೆ. ಇದರಿಂದ ಶಾಲೆಯ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನೆ ಗಂಭೀರವಾಗಿದೆ. ಶಾಲಾ ಕಟ್ಟಡದ ದುರಸ್ತಿ ಹಾಗೂ ನವೀಕರಣಕ್ಕಾಗಿ 2020 ರಿಂದಲೇ ಶಿಕ್ಷಣ ಇಲಾಖೆ, ಪಂಚಾಯಿತಿ ಹಾಗೂ ಸ್ಥಳೀಯ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಅನುದಾನ ಅಥವಾ ಕ್ರಮ ಕೈಗೊಳ್ಳದಿರುವುದಕ್ಕೆ ಪೋಷಕರು ಮತ್ತು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಭರವಸೆ: ಸರಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಶಾಲಾ ಕಟ್ಟಡದ ನವೀಕರಣ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಭರವಸೆ ನೀಡಿದ್ದಾರೆ. ಪಂಚಾಯಿತಿ, ಪಿಡಿಒ, ಶಿಕ್ಷಣ ಇಲಾಖೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ನಯಾಪೈಸೆಯೂ ಅನುದಾನ ಮಂಜೂರಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಕಟ್ಟೆಮಾರ್ ವಂದಿಸಿದರು.

ವಿಶೇಷ ವರದಿ: ನಿಶಾ ಇರುವೈಲ್