ಮೂಡುಬಿದಿರೆ: ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಕಲ್ಲಮುಂಡ್ಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಆಳ್ವಾಸ್ ನರ್ಸಿಂಗ್ ಸಯನ್ಸ್ ಕಾಲೇಜಿನ ವಿದ್ಯಾರ್ಥಿಗಳು ಗಿಡಕ್ಕೆ ನೀರು ಹಾಕುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.

ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ, ಪ್ರಬಂಧ ಮಂಡನೆ, ಭಿತ್ತಿಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಆಳ್ವಾಸ್ ವಿದ್ಯಾರ್ಥಿಗಳು ಸ್ಕಿಟ್, ಏಕಪಾತ್ರಾಭಿನಯ, ನೃತ್ಯ ಮತ್ತು ಪ್ರೊಜೆಕ್ಟರ್ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಬಳಿಕ ಶಾಲೆಯಿಂದ ಕಲ್ಲಮುಂಡ್ಕೂರು ಪಟ್ಟಣದವರೆಗೆ ಪರಿಸರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಆಳ್ವಾಸ್ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲೆ ಗ್ರೇಸಿ , ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತನಾಯ್ಕ, ಮುಖ್ಯ ಶಿಕ್ಷಕಿ ಹೇಮಲತಾ ಎಲ್.ಜಿ, ಶಿಕ್ಷಕರು ಉಪಸ್ಥಿತರಿದ್ದರು.