ಮೂಡುಬಿದಿರೆ: ಸ್ವಚ್ಛ ಭಾರತ ಮಿಷನ್ ನಗರ ವಿಭಾಗದ ರಾಜ್ಯ ಅಭಿಯಾನ ನಿರ್ದೇಶಕರು ಹಾಗೂ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಸುತ್ತೋಲೆಯನ್ವಯ, ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 'ಹವಾಮಾನ ಕ್ರಮಕ್ಕಾಗಿ ಜಾಗತಿಕ ಕರೆ ’' ಎಂಬ ವಿಷಯದಡಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ವಿವಿಧ ಉಪಕ್ರಮಗಳನ್ನು ನಡೆಸಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ಇಂದು. ಎಂ ಅವರು ಸಿಬ್ಬಂದಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ 2026ರ ಕುರಿತು ಮಾಹಿತಿ ನೀಡಿದರು. ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂಬುದಾಗಿ 4 ಬಗೆಯಲ್ಲಿ ತ್ಯಾಜ್ಯ ವಿಂಗಡಿಸುವ ವಿಧಾನವನ್ನು ವಿವರಿಸಿದರು. ಈ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಹಸಿರು, ನೀಲಿ, ಕೆಂಪು ಮತ್ತು ಕಪ್ಪು ಕಸದ ಬುಟ್ಟಿಗಳಲ್ಲಿ ಕ್ರಮವಾಗಿ ಶೇಖರಿಸುವ ಬಗ್ಗೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಿದರು.
ಪುರಸಭೆಯ ಪರಿಸರ ಅಭಿಯಂತರರು ಮೈಟ್ ಕಾಲೇಜಿನ 120 ಎಂ.ಬಿ.ಎ ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಿಂಗಡಣೆ ವಿಧಾನ, ಪರಿಸರ ಪ್ರತಿಜ್ಞೆ ಹಾಗೂ ಶೂನ್ಯ ತ್ಯಾಜ್ಯ ಜೀವನ ಶೈಲಿಯ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ನಿಯಮ ಉಲ್ಲಂಘಿಸುವವರಿಗೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದರು. ಸಾರ್ವಜನಿಕರು ಕಸ ಬಿಸಾಡುವ ಫೋಟೋ ಅಥವಾ ವಿಡಿಯೋಗಳನ್ನು ಪುರಸಭೆಯ ವಾಟ್ಸಾಪ್ ಸಂಖ್ಯೆ 9632187159ಗೆ ಕಳುಹಿಸಬಹುದು ಎಂದರು.
ಪುರಸಭಾ ಸಭಾಂಗಣದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಗೈಡ್ ಕ್ಯಾಪ್ಟನ್ ಸಂಧ್ಯಾ, ನಂದಿನಿ ಉಪಸ್ಥಿತರಿದ್ದರು. ಘನತ್ಯಾಜ್ಯ ವಿಂಗಡಣೆಯ 4 ವಿಧಾನಗಳು ಮತ್ತು ಬಟ್ಟೆಯ ಚೀಲ ಬಳಕೆಯ ಮಹತ್ವದ ಬಗ್ಗೆ ತರಬೇತಿ ನೀಡಿದರು. ವಾರದ ಸಂತೆಗೆ ಬರುವ ಗ್ರಾಹಕರಿಗೆ 2 ಬಟ್ಟೆಯ ಚೀಲಗಳನ್ನು 5 ರೂಪಾಯಿಗೆ ಮಾರಾಟ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ತರಬೇತಿಯ ಬಳಿಕ ಪರಿಸರ ಪ್ರತಿಜ್ಞೆ ಸ್ವೀಕರಿಸಿದ ವಿದ್ಯಾರ್ಥಿಗಳು ವಾರದ ಸಂತೆಗೆ ತೆರಳಿ ಗ್ರಾಹಕರಿಗೆ ಬಟ್ಟೆ ಚೀಲಗಳನ್ನು ಮಾರಾಟ ಮಾಡಿದರು. ಪ್ಲಾಸ್ಟಿಕ್ ಕೈಬಿಟ್ಟು ಬಟ್ಟೆ ಚೀಲ ಬಳಸುವಂತೆ ವಿನಂತಿಸಿದರು.