ಮೂಡುಬಿದಿರೆ: ಶತಮಾನೋತ್ಸವದ ಹೆಗ್ಗಳಿಕೆ ಹೊಂದಿರುವ ಇರುವೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ನಡೆಸಲಾಗಿರುವ ಭಾರಿ ಅಗೆತ ಇದೀಗ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಶಾಲೆಯ ಪಕ್ಕದಲ್ಲೇ ಕಾಲುದಾರಿಯ ಅಂಚಿನವರೆಗೆ ಭೂಮಿಯನ್ನು ಜೆಸಿಬಿ ಮೂಲಕ ಅಗೆದಿರುವ ಪರಿಣಾಮ, ಮಳೆಗಾಲದಲ್ಲಿ ದಾರಿ ಕುಸಿಯುವ ಅಪಾಯ ಎದುರಾಗಿದ್ದು, ಸುರಕ್ಷತೆ ಕುರಿತ ಪ್ರಶ್ನೆಗಳು ಉದ್ಭವಿಸಿವೆ.

ನಿತ್ಯ ಸಂಚಾರದ ದಾರಿಗೆ ಅಪಾಯದ ನೆರಳು ಕಿಟ್ಟುಬೆಟ್ಟು ಅರ್ಬಿ, ಕಾಳೂರು, ಕಟ್ಟಣಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದೇ ಕಾಲುದಾರಿಯನ್ನು ನಿತ್ಯ ಬಳಸುತ್ತಿದ್ದಾರೆ. ಆದರೆ ಇದೀಗ ದಾರಿಯ ಅಂಚಿನವರೆಗೂ ಅಗೆದಿರುವುದರಿಂದ, ಭಾರಿ ಮಳೆಯ ಸಂದರ್ಭ ದಾರಿ ಕುಸಿಯುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲಾ ಬಾವಿ, ಆವರಣ ಗೋಡೆಗೂ ಭೀತಿ ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ಜಾಗವೆಂದು ಹೇಳಲಾಗುತ್ತಿರುವ ಪ್ರದೇಶವನ್ನು ಶಾಲೆಗೆ ಸೇರಿದ ಸರಕಾರಿ ಬಾವಿಯವರೆಗೆ ಅಗೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಶಾಲಾ ಆವರಣದಿಂದ ಹರಿದುಬರುವ ಮಳೆನೀರು ಇದೇ ಭಾಗದ ಮೂಲಕ ಸಾಗುವುದರಿಂದ ಮಣ್ಣು ಜರಿದು ಬೀಳುವ ಸಾಧ್ಯತೆ ಇದ್ದು, ಆವರಣ ಗೋಡೆಗೂ ಹಾನಿಯಾಗುವ ಭೀತಿ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮಗಳ ಕೊರತೆ ಸ್ಥಳವನ್ನು ಅಗೆದ ವೇಳೆ ಶಾಲಾ ಆಡಳಿತ, ಎಸ್‌ಡಿಎಂಸಿ ಅಥವಾ ಶಿಕ್ಷಣ ಇಲಾಖೆಯ ಗಮನಕ್ಕೆ ವಿಷಯ ತರಲಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಶಾಲೆಯ ಹಿಂಭಾಗದಲ್ಲೇ ಜನಪ್ರತಿನಿಧಿಗಳ ನಿವಾಸಗಳಿದ್ದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಅನಾಹುತಕ್ಕೂ ಮುನ್ನ ಕ್ರಮ ಅಗತ್ಯ” “ಮಳೆಗಾಲದ ಆರಂಭದಲ್ಲೇ ಶಾಲೆಯ ಪಕ್ಕದವರೆಗೂ ಅಗೆದಿರುವುದು ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ ತಂದಿದೆ. ತಕ್ಷಣ ಸೂಕ್ತ ರಕ್ಷಣಾತ್ಮಕ ಕ್ರಮ ಕೈಗೊಳ್ಳದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ,” ಎಂದು ಇರುವೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದ್ದಾರೆ.

ರಾತ್ರಿ ವೇಳೆ ಮತ್ತಷ್ಟು ಅಪಾಯ “ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಿತ್ಯ ಬಳಸುವ ದಾರಿಯ ಅಂಚಿನವರೆಗೂ ಅಗೆದಿರುವುದು ಸರಿಯಲ್ಲ. ರಾತ್ರಿ ವೇಳೆ ಇಲ್ಲಿ ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲ. ಮಳೆಗಾಲದಲ್ಲಿ ಈ ಪ್ರದೇಶ ಅಪಾಯದ ತಾಣವಾಗುವ ಸಾಧ್ಯತೆ ಹೆಚ್ಚಿದೆ,” ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ಸಾಲ್ಯಾನ್ ಕಿಟ್ಟುಬೆಟ್ಟು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಿಸಿದ ಇಲಾಖೆಗಳು ಹಾಗೂ ಸ್ಥಳೀಯ ಆಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ವಿಶೇಷ ವರದಿ : ನಿಶಾ ಇರುವೈಲ್