ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿದ್ದಂತೆ ಮೂಡುಬಿದಿರೆ ಪಟ್ಟಣದ ಹಲವು ರಸ್ತೆಗಳು ಮತ್ತು ಮಾರುಕಟ್ಟೆ ಪ್ರದೇಶಗಳು ಮತ್ತೆ ತಮ್ಮ ಹಳೆಯ ಸಮಸ್ಯೆಗಳ ಮುಖಾಮುಖಿಯಾಗಿವೆ. ವರ್ಷಗಳಿಂದ ಬಗೆಹರಿಯದ ಹೊಂಡಗಳು, ಅವೈಜ್ಞಾನಿಕ ಚರಂಡಿ ವ್ಯವಸ್ಥೆ, ನೀರು ಹರಿಯಲು ಸೂಕ್ತ ಮಾರ್ಗಗಳ ಕೊರತೆ ಹಾಗೂ ಅಪೂರ್ಣ ಕಾಮಗಾರಿಗಳ ಪರಿಣಾಮವಾಗಿ ಪಟ್ಟಣದ ಜನರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ವಿಶೇಷವಾಗಿ ವಿಜಯನಗರ ರಸ್ತೆ, ದೊಡ್ಡಮನೆ ರಸ್ತೆ, ಹಳೆಯ ಮಾರುಕಟ್ಟೆ ಪರಿಸರ, ಕೃಷ್ಣಕಟ್ಟೆ ಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಪ್ರದೇಶಗಳಲ್ಲಿ ಮಳೆಯ ನೀರು ನಿಂತು ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಾಹನ ಸವಾರರು, ವ್ಯಾಪಾರಸ್ಥರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೊಂಡಗಳೇ ರಸ್ತೆಯ ಗುರುತು! ಮೂಡುಬಿದಿರೆಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾದ ವಿಜಯನಗರ ರಸ್ತೆ ಇಂದು ಹೊಂಡಗಳಿಂದಲೇ ಗುರುತಿಸಬಹುದಾದ ಸ್ಥಿತಿಗೆ ತಲುಪಿದೆ. ಕಳೆದ ಹಲವು ತಿಂಗಳುಗಳಿಂದ ರಸ್ತೆಯಲ್ಲಿರುವ ದೊಡ್ಡ ಹೊಂಡಗಳನ್ನು ಮುಚ್ಚುವ ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ. ಮಳೆಯ ನೀರು ಹೊಂಡಗಳಲ್ಲಿ ತುಂಬಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. "ರಸ್ತೆಯ ಹೊಂಡಗಳಿಗೆ ಈಗ ವಾರ್ಷಿಕೋತ್ಸವ ಆಚರಿಸುವ ಪರಿಸ್ಥಿತಿ ಬಂದಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹಾಗೆಯೇ ಉಳಿದಿದೆ," ಎಂದು ಸ್ಥಳೀಯರು ವ್ಯಂಗ್ಯ ವ್ಯಕ್ತಪಡಿಸುತ್ತಿದ್ದಾರೆ.

ಚರಂಡಿ ಕಾಮಗಾರಿಗಳ ವೈಫಲ್ಯ – ರಸ್ತೆಗೇ ಹರಿಯುತ್ತಿರುವ ನೀರು ಪಟ್ಟಣದ ಹಲವು ಭಾಗಗಳಲ್ಲಿ ಚರಂಡಿ ನಿರ್ಮಾಣಗೊಂಡಿದ್ದರೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಾಣುತ್ತಿಲ್ಲ. ವಿಜಯನಗರ ರಸ್ತೆಯಲ್ಲಿ ಎಡಭಾಗದಿಂದ ಹರಿದುಬರುವ ಮಳೆನೀರು ಬಲಭಾಗಕ್ಕೆ ಸಾಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ನೀರು ನಿಂತುಕೊಳ್ಳುತ್ತಿದೆ. ದೊಡ್ಡಮನೆ ರಸ್ತೆ ಹಾಗೂ ಪದ್ಮಾವತಿ ಸಭಾಭವನದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ಹೊಸದಾಗಿ ನಿರ್ಮಿಸಲಾದ ಕೆಲ ಚರಂಡಿಗಳಲ್ಲಿ ನೀರು ಹರಿಯದೇ ರಸ್ತೆ ಮೇಲೆಯೇ ಹರಿಯುತ್ತಿರುವುದು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಎಬ್ಬಿಸಿದೆ.

ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರವೇ ಸವಾಲು ಕೃಷ್ಣಕಟ್ಟೆ ಮತ್ತು ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ನಾಲ್ಕು ದಿಕ್ಕುಗಳಿಂದ ಹರಿದುಬರುವ ನೀರು ರಸ್ತೆಗಳಲ್ಲೇ ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮಾರುಕಟ್ಟೆ ಮುಂಭಾಗದಲ್ಲಿ ಅಸ್ತವ್ಯಸ್ತ ಪಾರ್ಕಿಂಗ್ ಕೂಡ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ವೇಗವಾಗಿ ಚಲಿಸುವ ವಾಹನಗಳಿಂದ ಕೆಸರು ನೀರು ಪಾದಚಾರಿಗಳ ಮೇಲೆ ಎರಚಲ್ಪಡುವುದು ಸಾಮಾನ್ಯ ದೃಶ್ಯವಾಗಿದೆ. ಇದರಿಂದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲೂ ನೆರೆ ಕಾಟ ಇತ್ತೀಚಿನ ಭಾರೀ ಮಳೆಯಿಂದ ಮೂಡುಬಿದಿರೆ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೆದ್ದಾರಿ ಪಕ್ಕದ ಅಂಗಡಿಗಳು ಮತ್ತು ಮನೆಗಳಿಗೆ ಮಳೆನೀರು ನುಗ್ಗುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಮಳೆಗಾಲ ಆರಂಭದಲ್ಲೇ ಈ ಪರಿಸ್ಥಿತಿ ಕಂಡುಬಂದಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆಗಳ ಮುನ್ಸೂಚನೆಯಾಗಿದೆ.

ಅಪೂರ್ಣ ಮಾರುಕಟ್ಟೆ ಸಂಕೀರ್ಣದಿಂದ ಹೆಚ್ಚಿದ ಸಮಸ್ಯೆ ಹಳೆಯ ಬಸ್ ನಿಲ್ದಾಣದಿಂದ ಕೃಷ್ಣಕಟ್ಟೆವರೆಗಿನ ಭಾಗದಲ್ಲಿ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಪುರಸಭೆ ಮಾರುಕಟ್ಟೆ ಸಂಕೀರ್ಣದ ಸುತ್ತ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆನೀರು ನಿಂತುಕೊಳ್ಳುತ್ತಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ನೀರು ಹರಿಯುವ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಜನರ ಆಗ್ರಹವೇನು?

  • ವಿಜಯನಗರ ಹಾಗೂ ದೊಡ್ಡಮನೆ ರಸ್ತೆಯ ಹೊಂಡಗಳನ್ನು ತುರ್ತಾಗಿ ಮುಚ್ಚಬೇಕು.
  • ಮಳೆನೀರು ಸರಾಗವಾಗಿ ಹರಿಯಲು ವೈಜ್ಞಾನಿಕ ಚರಂಡಿ ವ್ಯವಸ್ಥೆ ರೂಪಿಸಬೇಕು.
  • ಹಳೆಯ ಮಾರುಕಟ್ಟೆ ಹಾಗೂ ಕೃಷ್ಣಕಟ್ಟೆ ಭಾಗದ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
  • ಅಪೂರ್ಣ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಮಳೆಗಾಲದ ತುರ್ತು ನಿರ್ವಹಣಾ ಯೋಜನೆ ಜಾರಿಗೆ ತರಬೇಕು. ಎಂದು ಆಗ್ರಹಿಸಿದ್ದಾರೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವ್ಯಾಪಾರಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಮೂಡುಬಿದಿರೆ ಪಟ್ಟಣ ಮಳೆ ಬಂದಾಗ ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟದ ಪಟ್ಟಣವಾಗಿ ಬದಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪುನರಾವರ್ತನೆಯಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಈಗ ಅತ್ಯಗತ್ಯವಾಗಿದೆ. ಇಲ್ಲವಾದರೆ ಮಳೆಗಾಲವೆಂದರೆ ಜನರಿಗೆ ನೆಮ್ಮದಿಗಿಂತ ಹೆಚ್ಚು ಆತಂಕದ ಋತುವಾಗಿಯೇ ಉಳಿಯಲಿದೆ.

ವಿಶೇಷ ವರದಿ: ಯಶೋಧರ ವಿ. ಬಂಗೇರ