ಮೂಡುಬಿದಿರೆ: ಭಂಡಾರಿ ಸಮಾಜ ಸೇವಾ ಸಂಘದ 14ನೇ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ದಿ. ಜಯ ಭಂಡಾರಿ ಸ್ಮರಣಾರ್ಥ ಅವರ ಪತ್ನಿ ವಸಂತಿ ಭಂಡಾರಿ ಹಾಗೂ ಮಕ್ಕಳ ಪ್ರಾಯೋಜಕತ್ವದಲ್ಲಿ 13ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.

ಬಾರ್ಕೂರು ಭಂಡಾರಿ ಮಹಾ ಮಂಡಲದ ಅಧ್ಯಕ್ಷೆ ಅಮಿತಾ ಗಿರೀಶ್ ಭಂಡಾರಿ ಉದ್ಘಾಟಿಸಿ, ಸಮಾಜದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮೂಡುಬಿದಿರೆ ವಲಯದಲ್ಲಿ ನೂತನ ಮಹಿಳಾ ಸಂಘಟನೆಯನ್ನು ರಚಿಸಬೇಕಿದೆ. ಅದರ ಮೊದಲ ಹೆಜ್ಜೆಯಾಗಿ ಮಹಿಳೆಯರ ಅಧಿಕೃತ ವಾಟ್ಸಾಪ್ ಗುಂಪನ್ನು ಆರಂಭಿಸಬಹುದು ಎಂದು ಹೇಳಿದರು.

ಇಂದಿನ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಅವರ ಮೇಲಿದೆ. ಕೇವಲ ಸ್ವಹಿತಕ್ಕಾಗಿ ಬದುಕದೆ ಸಮಾಜದ ಹಿತಕ್ಕಾಗಿ ಶ್ರಮಿಸಿದಾಗ ಮಾತ್ರ ಸಂಘಟನೆಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂದು ಹೇಳಿದರು.

ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಗುರುಪ್ರಸಾದ್ ಎಂ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಶಶಿಕಾಂತ್ ಕರಿಂಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.

ಕರ್ಕಳ ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಭಂಡಾರಿ ಜೋಡುಕಟ್ಟೆ ಹಾಗೂ ಬಾಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಶಶಿಧರ್ ಕರ್ಕಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ಪೂರ್ವಾಧ್ಯಕ್ಷ ಯೋಗೀಶ್ ಭಂಡಾರಿ, ಗೌರವಾಧ್ಯಕ್ಷರಾದ ವಾಸುದೇವ ಭಂಡಾರಿ, ವಸಂತಿ ಜೆ. ಭಂಡಾರಿ, ಶಾಂತಾ ಕೆ. ಭಂಡಾರಿ, ಸುಮಿತ್ರ ಭಂಡಾರಿ ಕಾನ ಹಾಗೂ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಉಪಸ್ಥಿತರಿದ್ದರು. ಪ್ರಶಾಂತ್ ಭಂಡಾರಿ ಪುತ್ತಿಗೆ ಸ್ವಾಗತಿಸಿದರು. ಕೆ.ಎನ್. ಪ್ರಕಾಶ್ ಭಂಡಾರಿ ವಿಜ್ಞಾಪನಾ ಪತ್ರ ವಾಚಿಸಿದರು. ಸತೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸತ್ಯನಾರಾಯಣ ಪೂಜೆ, ಬನ್ನಡ್ಕ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ಹಾಗೂ ಅರಶಿನ-ಕುಂಕುಮ ಕಾರ್ಯಕ್ರಮ ನಡೆಯಿತು.

ಬಳಿಕ ಭಂಡಾರಿ ಕಲಾವಿದರು ಬೆದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿ. ಸುರೇಂದ್ರ ಕುಮಾರ್ ಕಲತ್ರಪಾದೆ ವಿರಚಿತ, ಸತೀಶ್ ಭಂಡಾರಿ ಕರಿಂಜೆ ನಿರ್ದೇಶನದ ಸಾಮಾಜಿಕ ಹಾಸ್ಯ ತುಳು ನಾಟಕ ‘ತುಂಗಾ ಭದ್ರಾ’ ಪ್ರದರ್ಶನಗೊಂಡಿತು.