ಮೂಡುಬಿದಿರೆ: ಧರ್ಮಸ್ಥಳ ಜ್ಞಾನವಿಕಾಸ ಯೋಜನೆಯಡಿ ವಾಲ್ಪಾಡಿ ಗ್ರಾಮದ ಪೆರಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 15ರಂದು ಶಿಕ್ಷಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಗ್ರಾಹಕ ಸಂಘಟನೆಯ ಸಂಪನ್ಮೂಲ ವ್ಯಕ್ತಿ ಹಾಗೂ ಕಾರ್ಯನಿರತ ಪತ್ರಕರ್ತ ರಾಯಿ ರಾಜ ಕುಮಾರ ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದ ಅವರು, ಶಿಕ್ಷಣ ಸಂಸ್ಥೆಗಳ ರೂಪುರೇಷೆ, ಕಾರ್ಯವೈಖರಿ ಮತ್ತು ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರಿ ಶಾಲೆಗಳ ಮಹತ್ವವನ್ನು ತಿಳಿಸಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.
ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆಯ ಅಧಿಕಾರಿ ಮಲ್ಲಿಕಾ ಸ್ವಾಗತಿಸಿ ವಂದಿಸಿದರು. ಯೋಜನೆಯ ಜಿಲ್ಲಾ ಮಟ್ಟದ ಅಧಿಕಾರಿ ಅಮೃತಾ ಶೆಟ್ಟಿ ಪ್ರಾಸ್ತಾವಿಕವಾಗಿ ಯೋಜನೆಯ ಪ್ರಮುಖ ಕಾರ್ಯಚಟುವಟಿಕೆಗಳು ಮತ್ತು ಉದ್ದೇಶಗಳ ಕುರಿತು ಮಾಹಿತಿ ನೀಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.