ಮೂಡುಬಿದಿರೆ: ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪ ವಾಸಿಸುತ್ತಿರುವ ಕುಸುಮಾ ಆಚಾರ್ಯ ಕುಟುಂಬಕ್ಕೆ ಹೊಸ ಮನೆ 'ಆಶ್ರಯ' ನಿರ್ಮಿಸಿಕೊಡುವ ಮೂಲಕ ಪಂಚಾಯಿತಿ ಮಾಜಿ ಸದಸ್ಯ, ಆಟೋ ಚಾಲಕ ಸತೀಶ್ ಪೂಜಾರಿ ಮಾನವೀಯ ಸೇವೆ ಮೆರೆದಿದ್ದಾರೆ.

ಕುಸುಮಾ ಆಚಾರ್ಯ, ಪುತ್ರ ವಿದ್ಯಾನಂದ ಹಾಗೂ ನಾದಿನಿ ವಿಮಲಾ ಹಲವು ವರ್ಷಗಳಿಂದ ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಳೆಗಾಲದ ವೇಳೆ ಕುಟುಂಬವನ್ನು ಪಂಚಾಯಿತಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿತ್ತು.

ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ್ದ ಸತೀಶ್ ಪೂಜಾರಿ, ನೆರೆ ಪರಿಹಾರ ಯೋಜನೆಯಡಿ 1.20 ಲಕ್ಷ ರೂ. ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಮನೆಗೆ ದಾರಿ ಕಲ್ಪಿಸಲು ಜಿನ್ನಮ್ಮ ಬಾಬು ಪೂಜಾರಿ ಕುಟುಂಬ ಜಾಗ ಬಿಟ್ಟುಕೊಟ್ಟಿದ್ದು, ಮನೆ ನಿರ್ಮಾಣಕ್ಕೆ ಭುವನಜ್ಯೋತಿ ಶಾಲೆ, ಸತೀಶ್ ಶೆಟ್ಟಿ, ಕೋಂಕೆ ನಾರಾಯಣ ಶೆಟ್ಟಿ ಹಾಗೂ ಪಂಚಾಯಿತಿ ಅಧ್ಯಕ್ಷೆ ಮಾಜಿ ಆಗ್ನೆಸ್ ಸಹಕಾರ ನೀಡಿದ್ದಾರೆ.

ದಾನಿಗಳ ನೆರವಿನಿಂದ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ಕುಸುಮಾ ಆಚಾರ್ಯ ಕುಟುಂಬ ಈ ಮಳೆಗಾಲವನ್ನು ಹೊಸ ಮನೆಯಲ್ಲಿ ಕಳೆಯುವಂತಾಗಿದೆ.