ಮೂಡುಬಿದಿರೆ: ಅಳಿಯೂರಿನಲ್ಲಿ ಕಳೆದ ಸೋಮವಾರ ರಾತ್ರಿ ನಡೆದ ಬೈಕ್ ಹಾಗೂ ಆಕ್ಟಿವಾ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ, ಮರೋಡಿಯ ಭಾಸ್ಕರ್ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಕೆಲ್ಲಪುತ್ತಿಗೆ ಸಮೀಪವಿರುವ ತನ್ನ ಪತ್ನಿಯ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಭಾಸ್ಕರ್ ತಲೆಗೆ ಗಂಭೀರ ಗಾಯಗಳಾಗಿದ್ದವು. ಅಪಘಾತದ ಬಳಿಕ ಅಳಿಯೂರು ಪರಿಸರದ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಅದೇ ಮಾರ್ಗವಾಗಿ ಬರುತ್ತಿದ್ದ ಮೂಡುಬಿದಿರೆ ಪುರಸಭೆಯ ಮಾಜಿ ಸದಸ್ಯ ರಾಜೇಶ್ ನಾಯ್ಕ್ ಹಾಗೂ ಬಾರ್ ಮಾಲಕ ಮನೋಹರ್ ಶೆಟ್ಟಿ ತಮ್ಮ ವಾಹನದಲ್ಲಿ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಮಕ್ಕಿಯ ಚೇತನ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ತೀರಾ ಬಡ ಕುಟುಂಬದವರಾಗಿದ್ದ ಭಾಸ್ಕರ್ ಅವರಿಗೆ ಒಂದು ಮಗುವಿದ್ದು, ಪತ್ನಿ ಗರ್ಭಿಣಿಯಾಗಿದ್ದಾರೆ.