ಮೂಡುಬಿದಿರೆ: ಕರಾವಳಿ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳವನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬೆಳೆಸುವ ಉದ್ದೇಶದಿಂದ ವಾರ್ಷಿಕ ₹5 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಭಾನುವಾರ ನಡೆದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಂಬಳದ ಓಟಗಾರರು, ತೀರ್ಪುಗಾರರು ಹಾಗೂ ಪರಿಚಾರಕರಿಗೆ ಹೆಚ್ಚಿನ ನೆರವು ಮತ್ತು ಸೌಲಭ್ಯ ಒದಗಿಸಲು ಸರ್ಕಾರದ ಅನುದಾನ ಪಡೆಯುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಈ ಸಂಬಂಧ ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಅವರನ್ನು ಭೇಟಿ ಮಾಡಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಕ್ರೀಡಾ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಮಾನವಾಗಿ ಹಂಚುವಂತೆ ಮನವಿ ಮಾಡಲಾಗಿದೆ ಎಂದರು.
ಮೈಸೂರು ದಸರಾ ಅಂಗವಾಗಿ ಈ ವರ್ಷ ಅಕ್ಟೋಬರ್ 17 ಮತ್ತು 18ರಂದು ಕಂಬಳ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ದೊರೆತಿದೆ ಎಂದು ತಿಳಿಸಿದರು. ಕರಾವಳಿ ಭಾಗದ ಸಂಸ್ಕೃತಿಯನ್ನು ಪ್ರವಾಸೋದ್ಯಮದ ಬ್ರ್ಯಾಂಡ್ ಆಗಿ ರೂಪಿಸುವ ಉದ್ದೇಶದಿಂದ ಮರವಂತೆ ಬೀಚ್, ಕಾಪು ಹಾಗೂ ತಣ್ಣೀರುಬಾವಿ ಪ್ರದೇಶಗಳಲ್ಲಿ ಕಂಬಳ ಲಾಂಛನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಪಟ್ಲ ಫೌಂಡೇಶನ್ ಮೂಲಕ ಕಂಬಳ ಪರಿಚಾರಕರು, ತೀರ್ಪುಗಾರರು ಹಾಗೂ ಓಟಗಾರರಿಗೆ ವಿಮಾ ಸೌಲಭ್ಯ ಕಲ್ಪಿಸುವ ಯೋಜನೆಯೂ ರೂಪುಗೊಳ್ಳುತ್ತಿದೆ ಎಂದು ಹೇಳಿದರು.
ಇದೇ ವೇಳೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆಯ ಚಂದ್ರಹಾಸ್ ಸಾಧು ಸನಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರೆಂಜಾಳ ವಿದ್ಯಾಧರ್ ಜೈನ್ ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಮಲ್ಲಿಕಾ ಯಶವಂತ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ, ತ್ರಿಶಾಲ್ ಕೆ. ಪೂಜಾರಿ, ಸತೀಶ್ಚಂದ್ರ ಸಾಲ್ಯಾನ್, ಗಿರೀಶ್ ಆಳ್ವ, ಕೌಶಿಕ್ ದಿನಕರ ಶೆಟ್ಟಿ ಹಾಗೂ ಬಾಲಚಂದ್ರ ಲೋಕಯ್ಯ ಶೆಟ್ಟಿ ಆಯ್ಕೆಯಾದರು. ಜತೆ ಕಾರ್ಯದರ್ಶಿಗಳಾಗಿ ಕೇಶವ ಭಂಡಾರಿ ಮತ್ತು ಸಂಜೀವ ಪೂಜಾರಿ, ಕೋಶಾಧಿಕಾರಿಯಾಗಿ ಸಂದೀಪ್ ಶೆಟ್ಟಿ ಆಯ್ಕೆಯಾದರು.
ಸಭೆಯಲ್ಲಿ 2026-29ನೇ ಸಾಲಿನ ಕಂಬಳ ಋತುವಿನ ದಿನಾಂಕಗಳ ಕುರಿತು ಚರ್ಚಿಸಿ ತಾತ್ಕಾಲಿಕ ವೇಳಾಪಟ್ಟಿಯ ರೂಪರೇಷೆ ಸಿದ್ಧಪಡಿಸಲಾಯಿತು. ಜಿಲ್ಲಾ ಮಟ್ಟದ ಅಧಿಕೃತ ಕಂಬಳಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ಪರಿಶೀಲನೆ ಹಾಗೂ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಸಭೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರ ಶಾಂತರಾಮ್ ಶೆಟ್ಟಿ, ಉಪ್ಪಿನಂಗಡಿ ಕಂಬಳದ ಸ್ಥಾಪಕ ಅಧ್ಯಕ್ಷ ಉಮೇಶ್ ಶಣೈ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.