ಮೂಡುಬಿದಿರೆ: ಐಪಿಎಲ್ ಮಾದರಿಯಲ್ಲಿ ಜಿಲ್ಲೆಯ ಎಲ್ಲ ಕಂಬಳಗಳಿಗೆ ಪ್ರಾಯೋಜಕತ್ವ ದೊರಕುವಂತಾಗಬೇಕು ಎಂದು ಜಿಲ್ಲಾ ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಂಬಳ ಆಯೋಜನೆಗೆ ಹೆಚ್ಚಿನ ಆರ್ಥಿಕ ಬಲ ಅಗತ್ಯವಿದ್ದು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವಿವಿಧ ವಲಯಗಳ ಪ್ರಾಯೋಜಕರನ್ನು ಸೆಳೆಯುವ ಪ್ರಯತ್ನಗಳು ನಡೆಯಬೇಕು ಎಂದು ತಿಳಿಸಿದರು.

ಐಪಿಎಲ್ ಮಾದರಿಯಲ್ಲಿ ಪ್ರಾಯೋಜಕತ್ವ ವ್ಯವಸ್ಥೆ ರೂಪುಗೊಂಡರೆ ಜಿಲ್ಲೆಯ ಎಲ್ಲ ಕಂಬಳಗಳಿಗೆ ಆರ್ಥಿಕ ನೆರವು ದೊರೆಯಲಿದೆ. ಇದರಿಂದ ಕಂಬಳ ಆಯೋಜನೆಯ ಗುಣಮಟ್ಟ ಹೆಚ್ಚುವುದರ ಜೊತೆಗೆ ಪರಂಪರೆಯ ಈ ಕ್ರೀಡೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಂಬಳದ ಬೆಳವಣಿಗೆಗೆ ಸಮಿತಿಗಳು, ಆಯೋಜಕರು ಹಾಗೂ ಅಭಿಮಾನಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದೂ ಅವರು ಕರೆ ನೀಡಿದರು. ಮಹಾಸಭೆಯಲ್ಲಿ ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು.