ಮೂಡುಬಿದಿರೆ: ರೋಟರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವನ್ನು ಖ್ಯಾತ ವಾಗ್ಮಿ, ಬರಹಗಾರ ಅರವಿಂದ ಚೊಕ್ಕಾಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅರವಿಂದ ಚೊಕ್ಕಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು ಮತ್ತು ಮೌಲ್ಯಗಳ ಬೆಳವಣಿಗೆ ಅಗತ್ಯವಾಗಿದೆ ಎಂದು ಹೇಳಿದರು. ಕಾಲೇಜು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ವಿವರಿಸಿದ ಅವರು, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಬಿ.ಎ. ಯತಿಕುಮಾರ ಸ್ವಾಮಿ ಗೌಡ ಮಾತನಾಡಿ, ಉತ್ತಮ ನಾಯಕನ ಗುಣಲಕ್ಷಣಗಳು ಹಾಗೂ ನಾಯಕತ್ವದ ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಜ್ಞಾನದ ಅರಿವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಗುರುಗಳು, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತೆ ಬದುಕಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್ ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಉಪ ಪ್ರಾಂಶುಪಾಲ ವೈಶಾಲಿ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಆನ್ಶಿಲ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಗೌರಿಶಂಕರ್ ವಂದಿಸಿದರು.