ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಆರ್‌ಪಿಎಲ್‌ನ 35 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೊಸ ತರಗತಿ ಕೊಠಡಿಗಳು ಹಾಗೂ ಪೋಷಕರು ಮತ್ತು ದಾನಿಗಳ ಸಹಕಾರದಿಂದ 1.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಂಥಾಲಯ ಒಳಗೊಂಡ ಸ್ಮಾರ್ಟ್ ತರಗತಿ ಜ್ಞಾನಾಂಬುದಿಯನ್ನು ಸಂಸದ ಬ್ರಿಜೇಶ್ ಚೌಟ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು , ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಧಾನಿ ಕಳೆದ 12 ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಶಾಲೆ ಮತ್ತು ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಒಂದು ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಮಾದರಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಉಮಾನಾಥ ಎ. ಕೋಟ್ಯಾನ್, ಸರ್ಕಾರ ಮೂಲಸೌಕರ್ಯ ಒದಗಿಸಿದರೆ ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಸಾರ್ವಜನಿಕ ಶಾಲೆಗಳ ಮಾದರಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಪಿಯುಸಿ ಶಿಕ್ಷಣ ಆರಂಭಗೊಳ್ಳಬೇಕು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಜಾನ್ಹವಿ, ಪ್ರಜ್ವಲ್ ಮತ್ತು ದೀಪಾ ಅವರನ್ನು ಸನ್ಮಾನಿಸಲಾಯಿತು.ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ್ ವಿ. ಕಾಳೆ, ಉದ್ಯಮಿ ಹಾಗೂ ದಾನಿ ಸುರೇಶ್ ಶೆಟ್ಟಿ, ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಮಹೇಶ್, ದಿನೇಶ್, ಗುತ್ತಿಗೆದಾರ ಸಂಪತ್ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಹರಿಣಾಕ್ಷಿ ಅವರನ್ನು ಗೌರವಿಸಲಾಯಿತು.

ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಚೀಫ್ ಮ್ಯಾನೇಜರ್ ಎಂ.ಕೆ. ರಾವ್, ಮೂಡುಬಿದಿರೆ ತಾಲೂಕು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ದೋಟ-ತೆಂಕಮಿಜಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿಗಾರ್, ಪಿಡಿಒ ರೋಹಿಣಿ ಬಿ., ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ ಹೆಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸವಿತಾ ವಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಚಾಲಚಂದ್ರ ಜಿ. ಆಚಾರಿ ವಂದಿಸಿದರು. ಹೊಸ ಕೊಠಡಿಗಳಿಗೆ ಶಂಕುಸ್ಥಾಪನೆ: ನೀರ್ಕೆರೆ ಪ್ರಾಥಮಿಕ ಶಾಲೆಗೆ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ತರಗತಿ ಕೊಠಡಿಗಳಿಗೂ ಬ್ರಿಜೇಶ್ ಚೌಟ ಶಂಕುಸ್ಥಾಪನೆ ನೆರವೇರಿಸಿದರು.