ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೂರ್ಣಕಾಲಿಕ ವೈದ್ಯರನ್ನು ಶೀಘ್ರ ನೇಮಕ ಮಾಡುವುದಾಗಿ ಭರವಸೆ ನೀಡಿದ ಅವರು, ಅಲ್ಲಿಯವರೆಗೆ ವಾರದಲ್ಲಿ ಮೂರು ದಿನ ಬೆಳುವಾಯಿ ಹಾಗೂ ಮೂರು ದಿನ ವೇಣೂರು ಆಸ್ಪತ್ರೆಯ ವೈದ್ಯರನ್ನು ಸೇವೆಗೆ ನಿಯೋಜಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ವೈದ್ಯರ ಕೊರತೆ ಕುರಿತು ಸೂರಜ್ ಜೈನ್ ಹಾಗೂ ಸುರೇಶ್ ಅಂಚನ್ ಸಾರ್ವಜನಿಕರ ಸಹಿ ಸಂಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆಸ್ಪತ್ರೆ ಪರಿಶೀಲನೆ ವೇಳೆ ಸಿಬ್ಬಂದಿ ಹಾಜರಾತಿ, ಔಷಧಿ ಹಾಗೂ ಉಪಕರಣಗಳ ಮಾಹಿತಿ ಪಡೆದ ಸಚಿವರು, ಕೆಲ ಸಿಬ್ಬಂದಿಯ ಗೈರುಹಾಜರಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ತಾಲೂಕು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಡಿ ದರ್ಜೆ ಸಿಬ್ಬಂದಿಯ ವೇತನ ಹೆಚ್ಚಳಕ್ಕೂ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಸುರೇಶ್ ಅಂಚನ್, ಸೂರಜ್ ಜೈನ್, ಸತೀಶ್ ಕಾಶಿಪಟ್ಣ, ವಿವಿಯನ್ ಪಿಂಟೊ, ಹಸೀನಾ ಖಾನ್, ಯಶೋಧರ ಪೂಜಾರಿ, ಸತೀಶ್ ಪೂಜಾರಿ, ಶರೀಫ್ ಎಂ.ಎಂ., ಇಕ್ಬಾಲ್ ವಾಲ್ಪಾಡಿ ಹಾಗೂ ಶಿರ್ತಾಡಿಯ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.