ಮೂಡುಬಿದಿರೆ : ಇಲ್ಲಿನ ರಿಂಗ್‌ರೋಡ್‌ನಿಂದ ಅಲಂಗಾರು ಮೂಲಕ ಕಾರ್ಕಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಭಾಗವು ಇದೀಗ ಅಪಘಾತಗಳ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದೆ. ದಿನೇದಿನೇ ಅಪಘಾತಗಳು ಹೆಚ್ಚುತ್ತಿದ್ದು, ಸೋಮವಾರವೂ ಕಾರೊಂದು ಅಪಘಾತಕ್ಕೀಡಾಗಿ ಜಖಂಗೊಂಡಿದೆ.
ಕಳೆದ ಕೆಲ ದಿನಗಳಲ್ಲಿ ಈ ಭಾಗದಲ್ಲಿ ಐದಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೆ ತುತ್ತಾಗಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಈ ಪ್ರದೇಶದಲ್ಲಿ ಭದ್ರತಾ ಕ್ರಮಗಳ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸ್ಥಳೀಯರ ಆಕ್ರೋಶ: ರಸ್ತೆ ಬಂದ್ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಸ್ಥಳೀಯರು ಟಿಪ್ಪರ್ ಮೂಲಕ ಮಣ್ಣು ತಂದು ರಸ್ತೆಗೆ ಸುರಿದು ಬಂದ್ ಮಾಡಿದ್ದಾರೆ. ಮುಂದಿನ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.