ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏಪ್ರಿಲ್ 26 ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವರ್ತೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ವರ್ಷ ಸಮಿತಿ ವತಿಯಿಂದ ಭರವಸೆ ನೀಡಿದಂತೆ ಎರಡು ಬಡ ಕುಟುಂಬಗಳಿಗೆ ವರ್ಷದ ಅಂತ್ಯದಲ್ಲಿ ಮನೆಯನ್ನು ನಿರ್ಮಿಸಿಕೊಡಲಾಗಿತ್ತು. ಈ ವರ್ಷವೂ ಜಯಂತಿ ಪ್ರಯುಕ್ತ 4 ಬಡ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ ಸಮುದಾಯದ ಬಡ ಕುಟುಂಬಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹ ಪ್ರತಿಭೆಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಮಿತಿ ತಿಳಿಸಿದರು. ಅಂಬೇಡ್ಕರ್ ಸಿದ್ಧಾಂತ ಹಾಗೂ ಆದರ್ಶಗಳನ್ನು ಪಾಲಿಸುತ್ತಾ ಬಡವರಿಗಾಗಿ ಈ ಸಮಿತಿ ಶ್ರಮಿಸುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದ್ದಾರೆ. ಅಂತಹ ಪುಣ್ಯಾತ್ಮರನ್ನು ಸಾರ್ವಜನಿಕರು ಒಟ್ಟಾಗಿ ಸೇರಿ ಆರಾಧಿಸಬೇಕು ಎಂದು ಸಮಿತಿ ವಿನಂತಿಸಿದೆ.
ಕಾರ್ಯಕ್ರಮದ ವಿವರ: ಅಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 1:00 ಗಂಟೆಗೆ ಭೋಜನ ವ್ಯವಸ್ಥೆ ಇರಲಿದೆ. ಮಧ್ಯಾಹ್ನ 2:00 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಸಮಿತಿಯ ಸಂಸ್ಥಾಪಕ ಹಾಗೂ ರಾಜ್ಯಧ್ಯಕ್ಷ ವಟೂರ್ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯ್ ಚಂದ್ರ ಜೈನ್, ಶಾಸಕ ಉಮಾನಾಥ್ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಿಯತ್ ಅಲಿ, ಸಮಾಜ ಸೇವಕ ಜಗದೀಶ್ ಅಧಿಕಾರಿ, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಎಸ್. ಮುಂಡಲಮನಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಬಾಲಸುಬ್ರಮಣ್ಯಂ, ಅರಣ್ಯ ಇಲಾಖೆ ಮುಖ್ಯ ಅಧಿಕಾರಿ ಕಿರಣ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಇಂದು, ಪಾಲಡ್ಕ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಸ್ಟೀಕರ್, ಎಂಜಿನಿಯರ್ ನವೀನ್ ಲೋಬೊ, ಉದ್ಯಮಿ ಜೋಸೆಫ್, ಎರಿಕ್ ಲೋಬೊ, ಸಿವಿಲ್ ಎಂಜಿನಿಯರ್ ಜಿನ್ನಿ, ಸಮಾಜ ಸೇವಕ ಸ್ವಾಮಿ, ಪುರಸಭೆ ಸದಸ್ಯ ಪಿ ಕೆ ಥಾಮಸ್, ಜೋಸೆಫ್ ಮಂಗಳೂರು, ಜೆಡಿಎಸ್ ಮುಖಂಡ ಅಮರಶ್ರೀ, ಸಮಾಜ ಸೇವಕ ಆರಿಫ್ ಬೆತುಬಾಯಿ, ಹೈದರಾಲಿ, ಎಲೆಕ್ಟ್ರೀಷಿಯನ್ ಕುಮಾರ್ ಪೂಜಾರಿ, ಉದ್ಯಮಿ ಮನ್ಸೂರ್, ಮಳಿಗೆ ಮಾಲೀಕ ರಫೀಕ್ ಹಾಗೂ ಫ್ಯಾಕ್ಟರಿ ಮಾಲೀಕ ಸಾವುಲ್ ಅಹಮದ್ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಉಮೇಶ್ ಮಿಜಾರ್ ಬಳಗದವರಿಂದ 'ತೆಲಿಕೆದ ಗೊಂಚಿಲ್' ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಘಟನೆಯ ಮೂಡುಬಿದಿರೆ ತಾಲೂಕು ಉಪಾಧ್ಯಕ್ಷ ರಂಜಿತ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮನೋಜ್ ಸುದ್ದಿಗೋಷ್ಠಿಯಲ್ಲಿದ್ದರು.