lಮೂಡುಬಿದಿರೆ:ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಇದೀಗ ಸಹಕಾರ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದ್ದು, ಸಪ್ತ ಸಂಸ್ಥಾಪಕರ ಕನಸಿನ ಕೂಸಾದ ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಕಳದ ಕುಕ್ಕುದಕಟ್ಟೆ ಸರ್ಕಲ್‌ನ ಪಿಂಟೋ ಟವರ್ಸ್‌ನಲ್ಲಿ ಲೋಕಾರ್ಪಣೆಗೊಂಡಿತು.

ಸೊಸೈಟಿ ಉದ್ಘಾಟಿಸಿ ಮಾತನಾಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್, ಕ್ರಿಯೇಟಿವ್ ಸಂಸ್ಥೆ ಕೇವಲ ಕ್ಯಾಂಪಸ್ ಒಳಗಿನ ಚಟುವಟಿಕೆಗೆ ಸೀಮಿತವಾಗದೆ ಹೊರಗಿನ ಹತ್ತಾರು ಮಂದಿಗೆ ಧ್ವನಿಯಾಗಬಲ್ಲ ಸಾಮಾಜಿಕ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಈ ಸೊಸೈಟಿಯಿಂದ ಊರಿನ ಜನರಿಗೆ ಒಳಿತಾಗಲಿ ಹಾಗೂ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಸೊಸೈಟಿ ಅಧ್ಯಕ್ಷ, ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ ಗಣನಾಥ ಶೆಟ್ಟಿ, ಸಂಸ್ಥೆಯು ಶೈಕ್ಷಣಿಕ ದೃಷ್ಟಿಕೋನದ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲೂ ಸಕ್ರಿಯವಾಗಿದೆ ಎಂದರು. ಈಗಾಗಲೇ 5 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗಿದ್ದು, ಮುಂದಿನ ದಿನಗಳಲ್ಲೂ ಸಮಾಜದೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಸಂಸ್ಥೆ ಇದೀಗ ಸಹಕಾರ ರಂಗಕ್ಕೆ ವಿಸ್ತರಿಸಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮಾತನಾಡಿ, ಈ ಸಂಘವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಸೇವೆ ಒದಗಿಸಿ ಆರ್ಥಿಕವಾಗಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

ರಾಜ್ಯ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ ಸಂಸ್ಥಾಪಕ ಆದರ್ಶ ಎಂ.ಕೆ. ಮಾತನಾಡಿ, ಜನಸಾಮಾನ್ಯರು ಆರ್ಥಿಕವಾಗಿ ಸಬಲರಾಗಲು ಈ ಸೊಸೈಟಿ ಪೂರಕವಾಗಲಿದೆ ಎಂದರು.

ಬಿ.ಎಂ. ಶಾಲೆಗೆ ಹಾಗೂ ಅಗತ್ಯವಿದ್ದವರಿಗೆ ಧನಸಹಾಯ ವಿತರಿಸಲಾಯಿತು. ಷೇರುದಾರರಿಗೆ ಪ್ರಮಾಣಪತ್ರ ಹಾಗೂ ಸಾಲ ಸೌಲಭ್ಯ ನೀಡಲಾಯಿತು. ಸಾಧಕರಾದ ನವೀನ್ ಪಿಂಟೋ, ಸುನೀಲ್ ಕುಮಾರ್ ಜಿ., ಯೋಗೀಶ್ ಅವರನ್ನು ಗೌರವಿಸಲಾಯಿತು.

ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್., ಗಣಪತಿ ಭಟ್, ಅಮೃತ್ ರೈ ಯು., ವಿಮಲ್ ರಾಜ್, ಸೊಸೈಟಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರವಿ ಹೆಗಡೆ, ನಿರ್ದೇಶಕರಾದ ಹರೀಶ್ ಡಿ, ಆಶಾ ಕೆ ಎಸ್, ರಶ್ಮಿ, ಸುನೀಲ್ ಕುಮಾರ್ ಹಾಗೂ ಸಲಹಾ ಸಮಿತಿ ಸದಸ್ಯರಾದ ಸುನೀಲ್ ಶೆಟ್ಟಿ, ಅಕ್ಷತಾ ಶೆಣೈ ಉಪಸ್ಥಿತರಿದ್ದರು. ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು. ರವಿ ಹೆಗಡೆ ವಂದಿಸಿದರು.