ಮೂಡುಬಿದಿರೆ: ಇಲ್ಲಿನ ಪೊಲೀಸರು ತೋಡಾರು ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎಂಟು ಜಾನುವಾರುಗಳನ್ನು ರಕ್ಷಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತೋಡಾರಿನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ನಿಲ್ಲಿಸಲು ಸೂಚಿಸಿದರೂ ವಾಹನ ಸವಾರರು ಓಡಿಹೋಗಿದ್ದು, ಬೆನ್ನಟ್ಟಿದ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿದರು. ಆದರೆ ಹರ್ಷದ್, ಸಫರ್ ಹಾಗೂ ಅಬೂಬಕರ್ ಸೇರಿ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಘಟನೆ ವಿವರ : ಮೂಡುಬಿದಿರೆ ಪೊಲೀಸ್ ಠಾಣೆಯ ಎಸ್. ಐ ಪ್ರತಿಭಾ ಕೆ.ಸಿ ಅವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ತೋಡಾರು ಗ್ರಾಮದ ದ್ವಾರದ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆ ಸಮಯದಲ್ಲಿ ಗರಡಿ ಕಡೆಯಿಂದ ಬಂದ ಕೆ.ಎ-19-ಎಂ.ಎ-7854 ನಂಬರಿನ ವ್ಯಾಗನರ್ ಕಾರು ಮತ್ತು ಅದರ ಹಿಂದೆಯೇ ಬಂದ ಕೆ.ಎ-19-ಎ.ಎ-1106 ನಂಬರಿನ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಆದರೆ ವಾಹನ ಸವಾರರು ನಿಲ್ಲಿಸದೆ ಮುಂದೆ ಚಲಾಯಿಸಿದರು. ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಹೋಗಿ ಅಡ್ಡಗಟ್ಟಿದರು. ಪಿಕಪ್ ವಾಹನದ ಚಾಲಕ ಹರ್ಷದ್ ಮತ್ತು ಇತರರು ಅಲ್ಲಿಂದ ಓಡಿ ಪರಾರಿಯಾದರು. ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ವ್ಯಾಗನರ್ ಕಾರಿನ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಕೂಡ ಸ್ಥಳದಿಂದ ಓಡಿ ಪರಾರಿಯಾದರು. ಪಿಕಪ್ ವಾಹನವನ್ನು ಪರಿಶೀಲಿಸಿದಾಗ, ಎರಡು ಹಸುಗಳು, ಎರಡು ಗಂಡು ದನಗಳು ಹಾಗೂ ನಾಲ್ಕು ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಾಲು ಹಾಗೂ ತಲೆಯನ್ನು ಹಗ್ಗದಿಂದ ಕಟ್ಟಿ ತುಂಬಿರುವುದು ಪತ್ತೆಯಾಯಿತು. ಪೊಲೀಸರು ವಾಹನಗಳು ಹಾಗೂ ಎಂಟು ಜಾನುವಾರುಗಳನ್ನು ರಕ್ಷಿಸಿ ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದರು. ಆರೋಪಿಗಳು ಕಳ್ಳತನದ ಜಾನುವಾರುಗಳನ್ನು ಅಬೂಬಕರ್ ಎಂಬುವವರ ಮನೆಗೆ ಸಾಗಿಸಿ, ಅಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.