ತುಳು ಚಿತ್ರರಂಗಕ್ಕೆ 'ಕ್ರಿಯೇಟಿವ್' ಆಯಾಮ: ಕ್ರಿಯೇಟಿವ್ ಕಾಲೇಜಿನಲ್ಲಿ ಡಿಟೆಕ್ಟಿವ್ ದಿವಾಕರ್ ಚಿತ್ರದ ಝಲಕ್ ಅನಾವರಣ
ಕಾರ್ಕಳ: ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಹಾಗೂ ಶಾಂತ ವಾತಾವರಣಕ್ಕೆ ಪ್ರಸಿದ್ಧಿ ಪಡೆದಿದೆ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ 'ಡಿಟೆಕ್ಟಿವ್ ದಿವಾಕರ್' ಎಂಬ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ಮೂಡಿಬರುತ್ತಿದೆ. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶ ನೀಡಲಿದೆ ಎಂದು ತಿಳಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಲನಚಿತ್ರದ ಸಹ ನಿರ್ಮಾಪಕರಾದ ವಿಭವ ಪ್ರೊಡಕ್ಷನ್‌ನ ಅಶ್ವತ್ ಎಸ್. ಎಲ್. ಮಾತನಾಡಿ, ಈ ಚಲನಚಿತ್ರವು ಒಂದು ಹೊಸ ಕಥಾಹಂದರವನ್ನು ಇಟ್ಟುಕೊಂಡು ನಿರ್ಮಾಣವಾಗಿದೆ. ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ನೆನಪಿಸುವ ಹಾಗೂ ರಹಸ್ಯಗಳನ್ನು ಅನಾವರಣಗೊಳಿಸುವ ಈ ಕಥೆ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಲಿದೆ ಎಂದು ತಿಳಿಸಿದರು. ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್. ಎಲ್., ಅಮೃತ್ ಆರ್. ರೈ, ಎನ್.ಪಿ. ಮೀಡಿಯಾದ ಮುಖ್ಯಸ್ಥ ವಾಸುದೇವ ಭಟ್, ಸಂದೀಪ್ ಎನ್., ಅಮ್ಮ ಚಾರಿಟೇಬಲ್ ಟ್ರಸ್ಟ್‌ನ ಅವಿನಾಶ್ ಶೆಟ್ಟಿ, ಚಿತ್ರದ ನಿರ್ದೇಶಕ ರಮಾನಂದ್, ಡಾ. ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಸುನೀಲ್ ಕಡ್ತಲ ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್ ಕಾರ್ಯಕ್ರಮ ನಿರ್ವಹಿಸಿದರು.
ಈ ಚಿತ್ರವನ್ನು ಅಮೃತ್ ಆರ್. ರೈ ಮತ್ತು ಸುನೀಲ್ ಶೆಟ್ಟಿ ನಿರ್ಮಿಸುತ್ತಿದ್ದು, ವಿಭವ ಪ್ರೊಡಕ್ಷನ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಸುನೀಲ್ ಕಡ್ತಲ ಕಥೆ ಬರೆದು ನಿರ್ದೇಶನ ಮಾಡಿದ್ದು, ವಿನೀಷ್ ಪೂಜಾರಿ ಮತ್ತು ಸಾಯಿನಾಥ್ ಪಡ್ಯಾರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂತೋಷ್ ಕುಲಾಲ್ ಛಾಯಾಗ್ರಹಣ, ಕಾರ್ತಿಕ್ ಮಲ್ಲೆ ಮತ್ತು ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಗಗನ್ ಡಿ., ಪ್ರವೀಣ್ ಜಕ್ಕನಹಳ್ಳ ಮತ್ತು ಪ್ರಜ್ವಲ್ ಸುವರ್ಣ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಚಿತ್ರಕ್ಕೆ ದರ್ಶತ್ ಭಂಡಾರಿ ವಸ್ತ್ರಾಲಂಕಾರ ಮಾಡಿದ್ದು, ಇನ್‌ಸ್ಪೈರ್ ಕ್ರಿಯೇಷನ್ ಪಬ್ಲಿಸಿಟಿ ಡಿಸೈನ್ ಸಿದ್ಧಪಡಿಸಿದೆ