ಗಗುರುಪುರದಲ್ಲಿುರುಪುರದಲ್ಲಿ ಲಾರಿ-ಬಸ್ ಭೀಕರ ಅಪಘಾತ: ಚಾಲಕರಿಗೆ ಗಂಭೀರ ಗಾಯ: ವಾಹನದಲ್ಲಿದ್ದ 6 ಲಕ್ಷ ನಗದು ಪೊಲೀಸರ ವಶಕ್ಕೆ ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ-ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಎದುರು ಬುಧವಾರ ಮಧ್ಯಾಹ್ನ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಕಾರ್ಕಳದತ್ತ ತೆರಳುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ 16 ಚಕ್ರದ ಲಾರಿ ಬೆಳ್ಳಿಬೆಟ್ಟು ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಅಪಘಾತದ ತೀವ್ರತೆಗೆ ಚಾಲಕರು ವಾಹನದಲ್ಲಿ ಸಿಲುಕಿ ನರಳಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರಾದ ರಫೀಕ್, ಶಿವರಾಮ, ರವೂಫ್ ಹಾಗೂ ಫಾಝಿಲ್ ಗ್ಯಾಸ್ ಕಟ್ಟರ್ ಬಳಸಿ ವಾಹನದ ಭಾಗಗಳನ್ನು ಕತ್ತರಿಸಿ ಗಾಯಾಳುಗಳನ್ನು ಹೊರತೆಗೆದರು. ಕಾಲು ಮುರಿತಕ್ಕೊಳಗಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಚಾಲಕರನ್ನು ಗುರುಪುರದ ಸೇವಾ ಬ್ರಿಗೇಡ್ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಇತರ ಐದು ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ರಕ್ಷಣಾ ಕಾರ್ಯದ ಸಮಯದಲ್ಲಿ ಬಸ್ಸಿನ ಒಳಗೆ ಅಂದಾಜು 6 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಸ್ಥಳೀಯರು ಕೂಡಲೇ ಅದನ್ನು ಸ್ಥಳದಲ್ಲಿದ್ದ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ನಗದು ಪತ್ತೆಯಾಗಿರುವುದನ್ನು ದೃಢಪಡಿಸಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.