ಮೂಡುಬಿದಿರೆ:ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ ಭಾನುವಾರ ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಯಕ್ಷತೂಣೀರ ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಹಾಗೂ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ನುಡಿದರು. ಇದೇ ಸಂದರ್ಭದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ಅಪರಂಜಿ ಅನಾವರಣಗೊಂಡಿತು.
ಸಂಸ್ಥೆಯ ದಶಮಾನದ ಸಂಭ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿಗೆ ಪೂಜ್ಯ ಶ್ರೀಗಳು ‘ಸಾಧನಾ ಪ್ರಶಸ್ತಿ’ ನೀಡಿ ಗೌರವಿಸಿದರು. ಫಲಪುಷ್ಪ, ಹಾರ, ಪ್ರಶಸ್ತಿ ಫಲಕ, ಪುಸ್ತಕ ಹಾಗೂ ಗೌರವಧನವನ್ನೊಳಗೊಂಡ ಈ ಪ್ರಶಸ್ತಿಯನ್ನು ಗಡಿನಾಡು ಕಾಸರಗೋಡಿನವರಾಗಿದ್ದು, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮಾಧ್ಯಮ ಹಾಗೂ ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹರೀಶ್ ಕೆ ಆದೂರು ಸಹಿತ ಹತ್ತು ಗಣ್ಯರಿಗೆ ಪ್ರದಾನ ಮಾಡಲಾಯಿತು. ಗೋಪಾಲಕೃಷ್ಣ ಭಟ್ ತುಪ್ಪೆಕಲ್ಲು (ವೈದಿಕ), ತೆಕ್ಕೆಕರೆ ಶಂಕರನಾರಾಯಣ ಭಟ್ (ಕನ್ನಡ ಸಾಹಿತ್ಯ), ವಿಷ್ಣು ಭಟ್ ಬಜೆ (ಪಾಕಶಾಸ್ತ್ರ), ಡಾ. ಕೆ. ಎಂ. ಕೆ. ಭಟ್ ಕಾಟಿಪಳ್ಳ (ವೈದ್ಯಕೀಯ), ಯತೀಶ್ ಕುಮಾರ್ ರೈ (ಶಿಕ್ಷಣ ಹಾಗೂ ಕಲೆ), ಗಣಪತಿ ಭಟ್ ಮಧುರಕಾನನ (ಕೃಷಿ ಮತ್ತು ಸಾಹಿತ್ಯ), ಹರೀಶ್ ಆದೂರು (ಪತ್ರಿಕೋದ್ಯಮ ಮತ್ತು ಸಾಹಿತ್ಯ), ಅನುಪಮಾ ರಾಘವೇಂದ್ರ ಉಡುಪುಮೂಲೆ (ಭರತನಾಟ್ಯ ಮತ್ತು ಸಾಹಿತ್ಯ), ರಾಕೇಶ್ ಗೋಳಿಯಡ್ಕ (ಪ್ರಸಾದನ ಕಲೆ) ಹಾಗೂ ಶ್ರೀಲಕ್ಷ್ಮೀ ಕುಳೂರು (ಚಿತ್ರಕಲೆ) ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪೆರಡಂಜಿ ಸ್ಮರಣೆಯನ್ನು ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು ಹಾಗೂ ಕೃತಿ ಪರಿಚಯವನ್ನು ನಾ. ಕಾರಂತ ಪೆರಾಜೆ ನಡೆಸಿಕೊಟ್ಟರು. ಭಾಗವತ ವೆಂಕಟ್ರಮಣ ಭಟ್ ತಲ್ಪಣಾಜೆ ಅವರಿಗೆ ಪೆರಡಂಜಿ ಪ್ರಶಸ್ತಿ ಹಾಗೂ ಕಲಾವಿದರಾದ ವಿಶ್ವನಾಥ ಭಟ್ ಬಜೆ ಮತ್ತು ರಾಜೇಶ್ವರಿ ಈಶ್ವರ ಭಟ್ ಅವರಿಗೆ ಯಕ್ಷತೂಣೀರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಕೀಲ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು. ಮುರಳೀಕೃಷ್ಣ ಸ್ವಾಗತಿಸಿ, ಗೀತಾ ಪ್ರಾರ್ಥಿಸಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮಮೂರ್ತಿ, ಹರಿಕೃಷ್ಣ ಭಟ್, ಗೋವಿಂದ ಭಟ್ ಬಳ್ಳಮೂಲೆ ಸನ್ಮಾನ ಪತ್ರ ವಾಚಿಸಿದರು. ಕೃಷ್ಣ ಭಟ್ ಅಡ್ಕ ವಂದಿಸಿದರು. ಸಾದ್ವಿ ಕೃಷ್ಣ ವಯನಾಡು ಹಾಗೂ ಅನ್ವಿತಾ ಪೆರಡಂಜಿ ಅವರ ನೃತ್ಯಾರ್ಪಣ ಮತ್ತು 'ಮೇದಿನಿ ನಿರ್ಮಾಣ-ಮಹಿಷ ವಧೆ' ಯಕ್ಷಗಾನ ಬಯಲಾಟ ನಡೆಯಿತು.