ಮೂಡುಬಿದಿರೆ: ಇಲ್ಲಿನ ಕಡಲಕೆರೆ ನಿಸರ್ಗಧಾಮದಲ್ಲಿ ನಡೆಯುತ್ತಿರುವ “ವೃಕ್ಷದಡಿ ಚಿಣ್ಣರ ವಿಸ್ಮಯ” ಎಂಬ ವಿಶಿಷ್ಟ ಮಕ್ಕಳ ಬೇಸಿಗೆ ಶಿಬಿರವು ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ.
ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಈ ಶಿಬಿರವು, ಮಕ್ಕಳ ಸೃಜನಶೀಲತೆ ಮತ್ತು ಪ್ರಕೃತಿಯೊಂದಿಗಿನ ನಂಟನ್ನು ಬಲಪಡಿಸುವ ದಿಸೆಯಲ್ಲಿ ವಿಭಿನ್ನ ಪ್ರಯತ್ನವಾಗಿ ಹೊರಹೊಮ್ಮಿದೆ.
ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್‌ನ ನಿರ್ದೇಶಕ ಹಾಗೂ ಚಿತ್ರಕಲಾವಿದ ಸಂತೋಷ್ ಮಾಳ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ಈ ಶಿಬಿರದಲ್ಲಿ, ಸೃಜನಾತ್ಮಕ ಕಲೆ, ಪರಿಸರ ಜಾಗೃತಿ, ಜಾನಪದ ಸಂಸ್ಕೃತಿ ಮತ್ತು ವೇದಿಕೆ ಕಲೆಗಳಿಗೆ ವಿಶೇಷ ಒತ್ತು ನೀಡಲಾಗಿದೆ.
ಮಕ್ಕಳು ಸ್ವತಃ ಸಣ್ಣ ಮನೆಗಳನ್ನು ನಿರ್ಮಿಸಿ ಅಲಂಕರಿಸುವುದು, ಮಣ್ಣಿನ ಮಡಕೆ ತಯಾರಿಕೆ, ತೆಂಗಿನ ಗರಿಯಿಂದ ಮಡಲು ಹೆಣೆಯುವುದು, ಹಕ್ಕಿಗಳ ಮಾದರಿ ತಯಾರಿಕೆ ಹಾಗೂ ಹುಲ್ಲಿನಿಂದ ಹಗ್ಗ ಹೊಸೆಯುವ ಕಲೆಗಳನ್ನು ಕಲಿತಿದ್ದಾರೆ.
ಇದಲ್ಲದೆ, ನೈಸರ್ಗಿಕ ಬಣ್ಣಗಳಿಂದ ಚಿತ್ರಕಲೆ, ಹಕ್ಕಿಗೂಡು ತಯಾರಿಕೆ ಮತ್ತು ಗಿಡದ ಎಲೆಗಳಿಂದ ಮೆಹಂದಿ ತಯಾರಿಸುವ ಸಾಂಪ್ರದಾಯಿಕ ವಿಧಾನಗಳನ್ನೂ ಮಕ್ಕಳಿಗೆ ಪರಿಚಯಿಸಲಾಗಿದೆ.
80 ಮಕ್ಕಳ ಸೃಜನಶೀಲ ಹಬ್ಬ:
ಎಂಟು ದಿನಗಳ ಕಾಲ ನಡೆಯುತ್ತಿರುವ ಈ ಶಿಬಿರದಲ್ಲಿ ಒಟ್ಟು 80 ಮಕ್ಕಳು ಭಾಗವಹಿಸಿದ್ದಾರೆ. ಕಳೆದ ವರ್ಷ “ಹಸಿರ ಮಡಿಲಲ್ಲಿ ಹಳೆಯ ನೆನಪುಗಳು” ಎಂಬ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಈ ಬಾರಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ, ನೈಸರ್ಗಿಕ ವಸ್ತುಗಳನ್ನೇ ಬಳಸುವ ಮೂಲಕ ಶಿಬಿರವನ್ನು ವಿಭಿನ್ನವಾಗಿ ರೂಪಿಸಲಾಗಿದೆ.
ರಂಗಭೂಮಿಯತ್ತ ಮಕ್ಕಳನ್ನು ಆಕರ್ಷಿಸಲು ಚಂದ್ರನಾಥ ಭಜಗೋಳಿ ಅವರು ಹಳೆಯ ನಾಟಕ ಶೈಲಿಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ನಾಟಕಾಭಿನಯ, ಅಭಿನಯ ಗೀತೆ, ಮಿಮಿಕ್ರಿ ಹಾಗೂ ರಂಗಗೀತೆಗಳ ಮೂಲಕ ಮಕ್ಕಳ ಪ್ರತಿಭೆ ಹೊರಹೊಮ್ಮಿದೆ.
ಮರದಿಂದ ಬಿದ್ದ ಒಣ ತುಂಡುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ಸೃಜಿಸುವ ಚಟುವಟಿಕೆಗಳೂ ನಡೆಯುತ್ತಿವೆ. ಪರಿಸರ ಸಂರಕ್ಷಣೆ ಮತ್ತು ಹಾವುಗಳ ಬಗ್ಗೆ ಇರುವ ಭಯ ನಿವಾರಣೆಗಾಗಿ ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.
ಪರಿಸರ ಸ್ನೇಹಿ ಶಿಬಿರದ ವಿಶೇಷತೆ:
ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಪುರಸಭೆಯ ಸ್ವಚ್ಛತಾ ರಾಯಭಾರಿ ಸಂಧ್ಯಾ ಅವರು ಊಟಕ್ಕಾಗಿ ಸ್ಟೀಲ್ ತಟ್ಟೆಗಳನ್ನು ಒದಗಿಸಿದ್ದಾರೆ. ಶಿಬಿರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಇರುವುದು ಪ್ರಮುಖ ವಿಶೇಷತೆ.
ಅಕ್ಷತಾ ಕುಡ್ಲ ಅವರಿಂದ ಜನಪದ ಹಾಡು ಹಾಗೂ ನೃತ್ಯ ತರಬೇತಿ ನಡೆಯುತ್ತಿದ್ದು, ಸುರಕ್ಷಾ ದೇವಡಿಗ, ಸುರೇಶ್, ರೇಷ್ಮಾ ಲೋಬೊ, ಅಕ್ಷತಾ ಕುಮಾರಿ, ಅಕ್ಷಿತಾ, ಮಧುರಾ, ರಶ್ಮಿತಾ, ಮೇಘನಾ, ರಾಘವೇಂದ್ರ, ಶ್ರೇಷ್ಠಾ, ಶೋಭಾ, ಶ್ರುತಿ ಮತ್ತು ರವಿಕಾಂತ ಆಚಾರ್ಯ ಅವರು ಶಿಬಿರದ ನಿರ್ವಹಣೆ ಹಾಗೂ ಮಾರ್ಗದರ್ಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪ್ರಕೃತಿಯೊಂದಿಗೆ ಮಕ್ಕಳ ಬೆಸೆಯುವ ಪ್ರಯತ್ನ:
ಆಧುನಿಕ ಯುಗದಲ್ಲಿ ವಿದ್ಯುನ್ಮಾನ ಸಾಧನಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗುತ್ತಿರುವ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.
“ಮಕ್ಕಳು ಪ್ರಕೃತಿಯೊಂದಿಗೆ ಹೇಗೆ ಬೆರೆಯಬಹುದು ಎಂಬುದನ್ನು ಪ್ರಾಯೋಗಿಕವಾಗಿ ಕಲಿಸುತ್ತಿದ್ದೇವೆ. ಈ ಶಿಬಿರವು ಏಪ್ರಿಲ್ 14ರಿಂದ 21ರವರೆಗೆ ವಿಭಿನ್ನವಾಗಿ ನಡೆದಿದೆ,” ಎಂದು ಶಿಬಿರದ ನಿರ್ದೇಶಕ ಸಂತೋಷ್ ಮಾಳ ತಿಳಿಸಿದ್ದಾರೆ.
ಪ್ರಕೃತಿಯ ಮಡಿಲಲ್ಲಿ ನಡೆಯುತ್ತಿರುವ ಈ ಪರಿಸರ ಸ್ನೇಹಿ ಶಿಬಿರವು ಮಕ್ಕಳಲ್ಲಿ ಸೃಜನಾತ್ಮಕತೆ, ಸಂಸ್ಕೃತಿ ಮತ್ತು ಪರಿಸರ ಜಾಗೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಪೋಷಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ವಿಶೇಷ ವರದಿ: ಯಶೋಧರ ವಿ. ಬಂಗೇರ