ಕಾರ್ಕಳ: ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ಇಂದು ಹೃದಯಾಘಾತದಿಂದ ನಿಧನರಾದರು. ಕಾರ್ಕಳ ದಾನಶಾಲಾ ಬಳಿಯ ನಿವಾಸಿಯಾಗಿದ್ದ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರು. ನಿಧನ ಕಾಲಕ್ಕೆ ಇವರಿಗೆ 82 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಗ್ರಾಮ ಕರಣಿಕರಾಗಿ ಉದ್ಯೋಗ ಮಾಡುತ್ತಿದ್ದ ಅವರು, ನಂತರ ಸಾರಿಗೆ ಬಸ್ ಉದ್ಯಮ ಪ್ರಾರಂಭಿಸಿದರು. ಎಂಭತ್ತರ ದಶಕದಲ್ಲಿ ಆರಂಭಿಸಿದ್ದ ಸರಳ ಮೋಟಾರ್ಸ್ ಬಸ್ ಸೇವೆಯು ಮುಂದೆ ವಿಸ್ತೃತವಾಗಿ ಬೆಳೆಯಿತು. ದರೆಗುಡ್ಡೆ, ಶಿರ್ತಾಡಿ, ಮೂಡುಬಿದಿರೆ, ಇರ್ವತ್ತೂರು ಹಾಗೂ ಕಾರ್ಕಳ ಮಾರ್ಗದಲ್ಲಿ ಮೊದಲ ಬಸ್ ಸೇವೆಯನ್ನು ಪ್ರಾರಂಭಿಸಿದ್ದರು. ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳಿಗೆ ಬಸ್ಸು ಸೇವೆ ಒದಗಿಸುವ ಮೂಲಕ ಇವರು ಜನಪ್ರೀತಿ ಗಳಿಸಿದ್ದರು. ಸರಳ ಮೋಟಾರ್ಸ್ ಬಸ್ಸು ಓಡಾಟವಿಲ್ಲದ ಗ್ರಾಮಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾರ್ಕಳ ಮತ್ತು ಮೂಡುಬಿದಿರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಇವರು ಸೇವೆ ಒದಗಿಸಿದ್ದಾರೆ. ಕೆಲವು ಮಾರ್ಗದ ಬಸ್ ಪರವಾನಗಿಯನ್ನು ಬೇರೆಯವರಿಗೆ ವರ್ಗಾಯಿಸಿದ್ದರೂ, ಹಳ್ಳಿಯ ಜನರು ಈಗಲೂ ಇದನ್ನು ಸರಳ ಬಸ್ ಎಂದೇ ಗುರುತಿಸುತ್ತಿದ್ದಾರೆ.
ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಬಳಿಕ ಪೂರ್ಣ ಪ್ರಮಾಣದಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಕಳದ ಜೈನ ಸಮಾಜದ ಸೇವಾ ಚಟುವಟಿಕೆಗಳು ಹಾಗೂ ಜಿಲ್ಲೆಯ ಜೈನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದ್ದರು. ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭಗಳಲ್ಲಿ ಶಕ್ತಿ ಮೀರಿ ದುಡಿಯುತ್ತಿದ್ದರು. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ದಿನಾಂಕ ಪ್ರಕಟಣೆಗೆ ಮುನ್ನವೇ ಇವರು ನಿಧನರಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಇವರ ನಿಧನಕ್ಕೆ ಕಾರ್ಕಳದ ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಜೈನ ಮುಖಂಡರು ಹಾಗೂ ಸಮಾಜದ ಬಂಧುಗಳು ಸಂತಾಪ ಸೂಚಿಸಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹಾಗೂ ಹಲವು ಸಾಮಾಜಿಕ ನಾಯಕರು ಮೃತರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಮೃತರು ಪುತ್ರಿ ಸರಳ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.