ಮೂಡುಬಿದಿರೆ: ಕಾಂತಾವರ ಗ್ರಾಮದ ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿ ಮತ್ತು ಶ್ರೀ ಉಚ್ಚಂಗಿ ದೇವಿಗುಡಿಯಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಕಾಲಾವಧಿ ಪಗ್ಗು ಮಾರಿಪೂಜಾ ಮಹೋತ್ಸವವು ಏಪ್ರಿಲ್ 21 ಮತ್ತು 22ರಂದು ನಡೆಯಲಿದೆ. ಏ.21ರಂದು ಬೆಳಿಗ್ಗೆ 9.00ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ಹಾಗೂ ನವಕ ಪ್ರಧಾನಹೋಮ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಕಲಶಾಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾಪೂಜೆ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 7.00 ಗಂಟೆಗೆ ಶ್ರೀ ದೇವರ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ದೇವಿಯ ಬಿಂಬ ಆಗಮನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ನಡೆಯಲಿರುವ ಅನ್ನಸಂತರ್ಪಣೆಯನ್ನು ಕೊಳಕೆಬೈಲು ಮಾತೃಶ್ರೀ ನಿಲಯದ ಪದ್ದು ಪೂಜಾರಿ ಸ್ಮರಣಾರ್ಥ ಪತ್ನಿ ಸಂಜೀವಿ ಪೂಜಾರಿ ಮತ್ತು ಮಕ್ಕಳು ಪ್ರಾಯೋಜಿಸಿದ್ದಾರೆ. ರಾತ್ರಿ 9.00 ಗಂಟೆಗೆ ಶ್ರೀ ದೇವಿಯ ಬಿಂಬ ಗದ್ದಿಗೆ ಪ್ರತಿಷ್ಠಾಪನೆ ಪೂಜೆ ಹಾಗೂ 11.00 ಗಂಟೆಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ, ರಾಶಿಪೂಜೆ ಮತ್ತು ದರ್ಶನ ಬಲಿ ಜರಗಲಿದೆ. ಏ.22ರಂಸು ಮುಂಜಾನೆ 4.00 ಗಂಟೆಗೆ ಅರಮನೆ ಪೂಜೆ ಹಾಗೂ 5.00 ಗಂಟೆಗೆ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಬೆಳಿಗ್ಗೆ 4.30ರಿಂದ ಹಣ್ಣುಕಾಯಿ ಹೂವಿನ ಪೂಜೆ ಹಾಗೂ ಕುಂಕುಮಾರ್ಚನೆ ಸೇವೆಗಳು ನಡೆಯಲಿವೆ. ಸಾಯಂಕಾಲ 4.30ರಿಂದ ಶ್ರೀ ದೇವಿಗೆ ಮಹಾಪೂಜೆ, ಮಂಗಳಾರತಿ, ದರ್ಶನ ಮತ್ತು ಪ್ರಶ್ನಾಚಿಂತನೆ ನಡೆದ ನಂತರ ದರ್ಶನಬಲಿ ಸಹಿತವಾಗಿ ಬಿಂಬ ನಿರ್ಗಮನವಾಗಲಿದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಮೋಹನದಾಸ ಅಡ್ಯಂತಾಯ, ಉಪಾಧ್ಯಕ್ಷ ಪದ್ಮನಾಭ ಎಸ್. ಅಮೀನ್, ಕಾರ್ಯದರ್ಶಿ ಜಯ ಎಸ್. ಕೋಟ್ಯಾನ್, ಖಜಾಂಚಿ ಲಿಂಗಪ್ಪ ದೇವಾಡಿಗ, ಅರ್ಚಕ ಗಣೇಶ್ ಕೆ., ಸದಸ್ಯರಾದ ಉಷಾಲತ ಶೆಟ್ಟಿ, ಪ್ರಮೀಳಾ ಜೆ. ಕುಂದರ್, ಪ್ರಶಸ್ತ ಶೆಟ್ಟಿ, ಸುಭಾಶ್ ನಾಯ್ಕ್ ಆಮಂತ್ರಿಸಿದ್ದಾರೆ.