ಮೂಡುಬಿದಿರೆ: ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಸಾನಿಧ್ಯಗಳ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ನೂತನ ಶಿಲಾಮಯ ಶ್ರೀ ನಾಗದೇವರ 19 ಬಿಂಬಗಳನ್ನು ಜಲಾಧಿವಾಸಗೊಳಿಸುವ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಕುತ್ಲೂರು ಶಿಲ್ಪಕಲಾ ಕೇಂದ್ರದಿಂದ ನೂತನ ಬಿಂಬಗಳನ್ನು ಹೊತ್ತ ವಾಹನವು ಚೆಂಡೆ, ಕೊಂಬು, ವಾದ್ಯಗಳೊಂದಿಗೆ ವೇಣೂರು ಮಾರ್ಗವಾಗಿ ಪಡ್ಡಂದಡ್ಕ ತಲುಪಿತು. ಅಲ್ಲಿಂದ ಕುಣಿತ ಭಜನೆ ತಂಡ, ಚೆಂಡೆ, ಕೊಂಬು, ವಾದ್ಯ ಹಾಗೂ ಸ್ವಾಗತ ಕಲಶಗಳೊಂದಿಗೆ ೫೦೦ಕ್ಕೂ ಹೆಚ್ಚಿನ ಭಕ್ತರು ಭವ್ಯ ಮೆರವಣಿಗೆಯ ಮೂಲಕ ಮಂಜನಬೆಟ್ಟು ಸಾನಿಧ್ಯಕ್ಕೆ ಬಿಂಬಗಳನ್ನು ಬರಮಾಡಿಕೊಂಡರು. ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬಿಂಬಗಳ ಜಲಾಧಿವಾಸ ಜರಗಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಿನರಾಜ್ ಜೈನ್ ಪದ್ಮಾಂಬ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ರವಿರಾಜ್ ಜೈನ್, ಸತ್ಯರಾಜ್ ಹೆಗ್ಡೆ, ಸನತಕುಮಾರ್ ಜೈನ್ ಸೇರಿದಂತೆ ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು. ಸತೀಶ್ ಉಜಿರ್ದಡ್ಡು ಕಾರ್ಯಕ್ರಮ ನಿರ್ವಹಿಸಿದರು. ಮೆರವಣಿಗೆಯಲ್ಲಿ ಪ್ರಮೋದ ಜೈನ್ ಪಾಡಾರು ಸಹಕರಿಸಿದರು. ಬಹುಪ್ರಾಚೀನವಾದ ಶ್ರೀ ನಾಗಬ್ರಹ್ಮ ದೇವರು ಹಾಗೂ ಪರಿವಾರ ದೈವಗಳ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ಮೇ ೨೪ರಂದು ಪ್ರತಿಷ್ಠಾಪನೆ ನಡೆಯಲಿದೆ.
ಮಂಜನಬೆಟ್ಟು: ನೂತನ ಶಿಲಾಮಯ ನಾಗದೇವರ ಬಿಂಬಗಳ ಜಲಾಧಿವಾಸ: ಭವ್ಯ ಮೆರವಣಿ
ಮಂಜನಬೆಟ್ಟು: ನೂತನ ಶಿಲಾಮಯ ನಾಗದೇವರ ಬಿಂಬಗಳ ಜಲಾಧಿವಾಸ: ಭವ್ಯ ಮೆರವಣಿ