ಮೂಡುಬಿದಿರೆ: ಎಂಟು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡಿದ್ದು, ಏಪ್ರಿಲ್ 29ರಂದು ಪುನಃ ಪ್ರತಿಷ್ಠೆ ಹಾಗೂ ಮೇ 1ರಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ-ವೇಣೂರು ಹಾದಿಯಲ್ಲಿ 10 ಕಿ.ಮೀ. ಹಾಗೂ ಬೆಳ್ತಂಗಡಿಯಿಂದ 23 ಕಿ.ಮೀ. ದೂರದ ರಾಜ್ಯ ಹೆದ್ದಾರಿ ಪಕ್ಕದಲ್ಲಿ, ಫಲ್ಗುಣಿ ನದಿ ತೀರದಲ್ಲಿ ಈ ದೇವಸ್ಥಾನವಿದೆ. ಬಿನಾಣಿ ಸೀಮೆಗೆ ಒಳಪಟ್ಟ ಮಾರುರು, ಕಲ್ಲಬೆಟ್ಟು, ಕರಿಂಜರ, ಮಾರ್ನಾಡು, ಕರ್ಪೆ, ಮಾರ್ಪಾಡಿ, ತೋಡಾರು, ಪುಚ್ಚಮೊಗರು ಹಾಗೂ ಹೊಸಬೆಟ್ಟು ಹೀಗೆ ಒಂಬತ್ತು ಮಾಗಣೆಗಳ 12ಕ್ಕೂ ಹೆಚ್ಚು ಗ್ರಾಮಗಳ ಭಕ್ತಾದಿಗಳ ಶ್ರದ್ಧಾಕೇಂದ್ರವಾಗಿ ಈ ಕ್ಷೇತ್ರವಿದೆ.
ದಾನಿಗಳ ಸಹಕಾರದೊಂದಿಗೆ ಗರ್ಭಗುಡಿ, ಮುಖಮಂಟಪ ಹಾಗೂ ಗೋಪುರ ನಿರ್ಮಿಸಲಾಗಿದೆ. ಇದರೊಂದಿಗೆ ತೀರ್ಥಮಂಟಪ, ಹನುಮಂತ ಮತ್ತು ಗಣಪತಿ ಗುಡಿಗಳು, ಉಗ್ರಾಣ, ಕೊಡಮಣಿತ್ತಾಯ ಸ್ಥಾನ, ತಂತ್ರಿಗಳ ಕೊಠಡಿ, ಜಾತ್ರೋತ್ಸವ ಕಟ್ಟೆ, ಕಾರ್ಯಾಲಯ, ನೂತನ ಧ್ವಜಸ್ತಂಭ, ಧ್ವಜಕಟ್ಟೆ, ಬಲಿಪೀಠ ಹಾಗೂ ದ್ವಾರ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ. ದೇವಸ್ಥಾನದ ಆವರಣದಲ್ಲಿ ಸಂಪೂರ್ಣ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ ಆಸ್ರಣ್ಣ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಶ್ರೀಪತಿ ಉಪಾಧ್ಯಾಯ ಬಡೆಕೋಡಿ, ಸುಧಾಕರ ಶೆಟ್ಟಿ ಮಿತ್ತೊಟ್ಟುಗುತ್ತು, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಸ್ವಾಗತ ಸಮಿತಿ ಸದಸ್ಯ ರಮೇಶ್ ಎಸ್. ಶೆಟ್ಟಿ ಇದ್ದರು.