ಮೂಡುಬಿದಿರೆ: ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮವು ಏ.18 ಮತ್ತು 19ರಂದು ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ರಾಜೇಶ್ ಬಂಗೇರ ಸಂಚಾಲಕ ಹಾಗೂ ಶಾಂತಾರಾಮ ಕುಡ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1923 ರಲ್ಲಿ ಸಾಲ್ವದೊರ್ ಡಿಸೋಜ ಈ ಶಾಲೆಯನ್ನು ಸ್ಥಾಪಿಸಿದ್ದು 1925 ರಲ್ಲಿ ಮಾನ್ಯತೆ ಪಡೆದಿದೆ. ಮುಳಿಹುಲ್ಲಿನ ಈ ಶಾಲೆಯು ಬೆಂಕಿಗಾಹುತಿಯಾದಾಗ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಪಳಕಳ ಸೀತಾರಾಮ್ ಭಟ್ ಪುನರ್ ನಿರ್ಮಿಸಿದರು. ಮುಚ್ಚಿಹೋಗುವ ಹಂತದಲ್ಲಿದ್ದ ಈ ಶಾಲೆಯನ್ನು ಕಾಲಾಂತರದಲ್ಲಿ ಮೂಡುಬಿದಿರೆಯ ವೆಂಕಟರಮಣ ಶಿಕ್ಷಣ ಸಂಸ್ಥೆ, ಮಂಗಳೂರಿನ ಸೇವಾಂಜಲಿ ಟ್ರಸ್ಟ್ ನಡೆಸಿಕೊಂಡು ಬಂದಿದ್ದು ಈಗ ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ಈ ಶಾಲೆಯನ್ನು ಮುನ್ನಡೆಸುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ 310 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಏ.19 ರಂದು ಶತಮಾನೋತ್ಸವ ಸಂಭ್ರಮ ನಡೆಯಲಿದ್ದು ಶಾಲೆಯ ಹಳೆಯ ವಿದ್ಯಾರ್ಥಿ ಆಂಧ್ರಪ್ರದೇಶ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಉದ್ಘಾಟಿಸಲಿದ್ದಾರೆ. ಆರ್‌ಎಸ್‌ಎಸ್‌ನ ಪ್ರಾಂತ ಸಹಕರ‍್ಯವಾಹ ಪ್ರಕಾಶ್ ಪಿ.ಎಸ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಎಂಆರ್‌ಜಿ ಗ್ರೂಪ್‌ನ ಡಾ. ಪ್ರಕಾಶ್ ಶೆಟ್ಟಿ, ಉದ್ಯಮಿ ಪಿ.ಎಸ್ ಕಾಮತ್, ವೆಂಕಟರಮಣ ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಾಲಾ ಸಂಚಾಲಕ ಶಾಂತಾರಾಮ ಕುಡ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಯಂಕಾಲ 4.30ಕ್ಕೆ ಸಮೋರೋಪ ಸಮಾರಂಭ ನಡೆಯಲಿದ್ದು, ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ರಾಜೇಶ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್, ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಕೇಶವ ಹೆಗ್ಡೆ, ಕೋಶಾಧಿಕಾರಿ ಎಸ್ ಎನ್ ಬೋರ್ಕರ್ ಉಪಸ್ಥಿತರಿದ್ದರು.