ಮೂಡುಬಿದಿರೆ: ನಿಡ್ಡೋಡಿ ಸೈಂಟ್ ತೆರೇಸಾ ಚರ್ಚ್ ಹಾಗೂ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ತಗುಲಿ ಸುಮಾರು ಹತ್ತು ಎಕರೆ ಪ್ರದೇಶದ ಮರಗಿಡಗಳು ಬೆಂಕಿಗಾಹುತಿಯಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ತುರ್ತು ಸೇವೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮೂಡುಬಿದಿರೆಯಲ್ಲಿ ಸೀಮಿತ ಸೌಲಭ್ಯವಿರುವ ಕಾರಣ ಕದ್ರಿ ಅಗ್ನಿಶಾಮಕ ಠಾಣೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ವಾಹನ ಲಭ್ಯವಿಲ್ಲದ ಕಾರಣ ಬಂದ ಕೂಡಲೇ ಕಳುಹಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ರಾತ್ರಿ 10 ಗಂಟೆಯಾದರೂ ಅಗ್ನಿಶಾಮಕ ವಾಹನ ಬಾರದೆ ಇರುವುದು ಸಾರ್ವಜನಿಕರ ಅಸಮಾಧಾನ ವ್ಯಕ್ತಿಪಡಿಅಇದ ಬೆಂಕಿ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿದ ಚರ್ಚ್ ಧರ್ಮಗುರುಗಳು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರಿಗಾಗಿ ಕಾಯದೆ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಚರ್ಚ್ ಭಕ್ತಾದಿಗಳು ಒಟ್ಟಾಗಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಾರ್ವಜನಿಕರ ಈ ಸಮಯಪ್ರಜ್ಞೆಯಿಂದಾಗಿ ಶಾಲೆ ಮತ್ತು ಚರ್ಚ್ ಪರಿಸರಕ್ಕೆ ಹರಡುತ್ತಿದ್ದ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.