ವಿದ್ಯೆ ಮನುಷ್ಯನ ಅತ್ಯುತ್ತಮ ಆಭರಣ ಇದನ್ನು ಯಾರೂ ಕದಿಯಲಾರರು. ನಿಮ್ಮಲ್ಲಿ ಮೂಡುವ ಸಂಶಯಗಳನ್ನು ಅಡಗಿಸಿಡುವ ಬದಲು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಿ. ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಶಾಲೆಯ ಹಳೆಯ ವಿದ್ಯಾರ್ಥಿ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಹೇಳಿದರು. ಅವರು ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾಯ9ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಕ್ಕಳಿಗೆ ಸಂಸ್ಕಾರ ನೀಡಲು ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದೆ. ಸಮಾಜದ ಜನರಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ಕಾರ್ಯಾಲಯವನ್ನು ತೆರೆಯಲು ಉದ್ದೇಶಿಸಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು ಆರ್‌ಎಸ್‌ಎಸ್‌ನ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ. ಎಸ್ ಶುಭಾಸಂಸನೆಗೈದರು. ಶಾಲೆಯ ಹಳೆಯ ವಿದ್ಯಾರ್ಥಿ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂಆರ್‌ಜಿ ಗ್ರೂಫ್‌ನ ಡಾ. ಪ್ರಕಾಶ್ ಶೆಟ್ಟಿ, ಉದ್ಯಮಿ, ಶಂಕರ್ ಎಲೆಕ್ಟಿçಕಲ್ಸ್ ಕಂ ಪ್ರೈವೇಟ್ ಲಿ.ನ ರಾಜೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸಂಸ್ಥಾಪಕರ ಪರವಾಗಿ ಮೇರಿ ಡಿಸೋಜ, ನಿವೃತ್ತ ಮುಖ್ಯ ಶಿಕ್ಷಕರಾದ ಆಂಡ್ರೂ ಸೆರಾವೋ, ಜಯರಾಜ್ ಜೈನ್, ಜಯರಾಮ್ ರಾವ್ ಅವರನ್ನು ಗೌರವಿಸಲಾಯಿತು. ರಾಷ್ಟ್ರಿಯ ಕ್ರೀಡಾಪಟು ಪ್ರೀತಿ, ಭಗವದ್ಗೀತೆ ಕಂಠಪಾಠದಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಪ್ರಧಾನ್ ಆರ್. ಭಂಡಾರಿ ಮತ್ತು ಮನಸ್ವಿ ಶರ್ಮ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ, ಶ್ರೀ ವೆಂಕಟರಮಣ ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ ಮತ್ತು ಗೀತಾ ವಿಜಯ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಕೇಶವ ಹೆಗ್ಡೆ, ಕೋಶಾಧಿಕಾರಿ ಎಸ್ ಎನ್ ಬೋರ್ಕರ್ ಮತ್ತಿತರರಿದ್ದರು. ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಎಂ. ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಹನ್ ಅತಿಕಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ವಂದಿಸಿದರು.