ಮೂಡುಬಿದಿರೆ: ಪ್ರೇರಣಾ ವಿದ್ಯಾ ಸಂಸ್ಥೆಯ ಆಡಳಿತದಲ್ಲಿ ಕಾಲ ಕಾಲಕ್ಕೆ ಬದಲಾವಣೆಗಳಾದರೂ,ಸರಕಾರದಿಂದ ಬಿಸಿಯೂಟ ಬಿಟ್ಟರೆ ಬೇರೆ ಯಾವ ಅನುದಾನವೂ ಸಿಗದೇ ಇದ್ದರೂ, ಕೇವಲ ವಿದ್ಯಾ ಪೋಷಕರ ಸತತ ಪ್ರೋತ್ಸಾಹ ಬೆಂಬಲದಿಂದ ಸವಾಲುಗಳನ್ನು ಮೆಟ್ಟಿ ನಿಂತು ಜಿಲ್ಲೆಯಲ್ಲಿಯೇ ಪ್ರೇರಣಾ ಶಾಲೆಯನ್ನು ಮಾದರಿ ಶಾಲೆಯಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ. 50 ರಷ್ಟಿದ್ದ ಮಕ್ಕಳ ಸಂಖ್ಯೆ ಕೆಲವೇ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿ ಶಿಶು ಮಂದಿರ ಸಹಿತ ಹಿರಿಯ ಪ್ರಾಥಮಿಕ ಶಾಲೆ ಸೇರಿ ಇದೀಗ 310 ಮಕ್ಕಳನ್ನು ಶಾಲೆ ಹೊಂದಿದ್ದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭಾರತೀಯ ಶಿಕ್ಷಣ ಪದ್ಧತಿಗೆ ನಾವು ಸದಾ ಬದ್ಧರಾಗಿದ್ದೇವೆ ಎಂದು ಶಾಲಾ ಸಂಚಾಲಕ ಎಂ.ಶಾಂತಾರಾಮ ಕುಡ್ವ ಹೇಳಿದರು . ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆ, ವಿದ್ಯಾ ಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರ ಎಂ. ದಯಾನಂದ ಪೈಯವರು ಧ್ವಜಾರೋಹಣ ಮಾಡಿ, ಹಿಂದೆ ತಾನು ಈ ಶಾಲೆಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿನ ಸೇವಾಚಟುವಟಿಕೆಗಳನ್ನು ಸ್ಮರಿಸಿ ಶುಭ ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ರಾಜೇಶ್ ಎಂ.ಬಂಗೇರ, ಟ್ರಸ್ಟಿಗಳಾದ ಡಾ.ಕೇಶವ ಹೆಗ್ಡೆ, ಮಂಜುನಾಥ ಶೆಟ್ಟಿ, ಬಾಲಕೃಷ್ಣ ಬೋರ್ಕರ್, ಡಾ.ಆನಂದ ಕಾರ್ಲ, ಸೋಮನಾಥ್ ಕೋಟ್ಯಾನ್ ಉಪಸ್ಥಿತರಿದ್ದರು. ವರ್ತಕ ಡಿ.ಶ್ರೀನಿವಾಸ ಕಿಣಿ, ತೆರಿಗೆ ಸಲಹೆಗಾರ ಶೇಖರ್ ಮೂಡುಬಿದಿರೆ, ನಿವೃತ್ತ ಮುಖ್ಯ ಶಿಕ್ಷಕ ಜಯರಾಮ ರಾವ್, ಜಯರಾಜ್ ಜೈನ್ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ವಂದಿಸಿದರು. ಶಿಕ್ಷಕಿ ಹರ್ಷಿತಾ ನಿರೂಪಿಸಿದರು.