ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘ ಮೂಡುಬಿದಿರೆ, ಜೀವನ ಸಾರ್ಥಕತೆ ವಿಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಏಪ್ರಿಲ್ 18ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಲ್ಪವೃಕ್ಷ ಸಭಾಭವನ ಅಂಗಾಂಗ ದಾನ ಶಿಬಿರವನ್ನು ಆಯೋಜಿಸಲಾಗಿದೆ. ಜೀವ ಸಾರ್ಥಕತೆಯಲ್ಲಿ ಅಂಗಾಂಗಕ್ಕಾಗಿ ನೋಂದಾಯಿಸಿದವರು ಮಾತ್ರ ಅಂಗಾಂಗಗಳನ್ನು ಪಡೆಯಲು ಸಾಧ್ಯವಿರುವುದರಿಂದ, ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ನೋಂದಾಯಿಸಿಕೊಳ್ಳುವಂತೆ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನ ಅಧ್ಯಕ್ಷ ಹರೀಶ್ ಎಂ.ಕೆ ಮತ್ತು ಸರ್ವಸದಸ್ಯರು ತಿಳಿಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಅಂಗಾಂಗ ದಾನ ಮಾಡುವುದು ಕಾನೂನುಬದ್ಧವಾಗಿದೆ. ಒಬ್ಬ ದಾನಿಯು ಹೃದಯ, ಮೂತ್ರಪಿಂಡಗಳು, ಯಕೃತ್ತು, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡುವ ಮೂಲಕ ಸುಮಾರು 8 ಜನರ ಜೀವವನ್ನು ಉಳಿಸಬಹುದು. ಹಾಗೆಯೇ ಮೃತ ವ್ಯಕ್ತಿಯ ಚರ್ಮ, ಮೂಳೆಗಳು, ಅಸ್ಥಿಮಜ್ಜೆ, ಹೃದಯದ ಕವಾಟಗಳು ಮತ್ತು ಕಾರ್ನಿಯಾ ಮುಂತಾದ ಅಂಗಾಂಶಗಳನ್ನು ದಾನ ಮಾಡುವ ಮೂಲಕ 50 ಜನರಿಗೆ ಸಹಾಯ ಮಾಡಬಹುದು. ಯಾವುದೇ ವಯಸ್ಸಿನ ವ್ಯಕ್ತಿಗಳು, ಲಿಂಗಭೇದವಿಲ್ಲದೆ, ಅಂಗಾಂಗ ದಾನ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.