ಮಂಗಳೂರು: ಅಂಬೆಗಾಲಿಡುತ್ತಲೇ ಗೆಜ್ಜೆ ಕಟ್ಟಿ ಕಲಾ ದೇವಿಯ ಆರಾಧನೆಗೆ ಇಳಿದ ಈ ಪುಟಾಣಿಯ ಪ್ರತಿಭೆ ಅಸಾಮಾನ್ಯವಾದುದು. ಕೃಷ್ಣ ವೇಷದ ತುಂಟಾಟದ ಮೂಲಕ ವೇದಿಕೆ ಹತ್ತಿದ ಈಕೆ, ಇಂದು ಭರತನಾಟ್ಯ, ಯಕ್ಷಗಾನ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ.
ದಕ್ಷಿಣ ಕನ್ನಡದ ಎಕ್ಕಾರು ಗ್ರಾಮದ ವಾಸು ಎಕ್ಕಾರ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ಚಾತುರ್ಯ ಎಕ್ಕಾರ್, ತನ್ನ ಬಾಲ್ಯದಲ್ಲೇ 'ಬಾಲ ಕಲಾ ರತ್ನ' ಪ್ರಶಸ್ತಿ ಮುಡಿಗೇರಿಸಿಕೊಂಡು ಕರಾವಳಿಯ ಸಾಂಸ್ಕೃತಿಕ ಲೋಕದ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮುತ್ತಿದ್ದಾಳೆ.
ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಈಕೆ, ಓದಿನ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾಳೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕೃಷ್ಣ ವೇಷ ಸ್ಪರ್ಧೆಯ ಮೂಲಕ ಕಲಾ ರಂಗಕ್ಕೆ ಪ್ರವೇಶಿಸಿದ ಚಾತುರ್ಯ, ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ನಗದು ಬಹುಮಾನಗಳನ್ನು ಬಾಚಿಕೊಂಡಿದ್ದಾಳೆ. ಚಿಕ್ಕಂದಿನಿಂದಲೇ ನೃತ್ಯ, ಸಂಗೀತ, ಚಿತ್ರಕಲೆ ಮತ್ತು ವೇಷಭೂಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಈಕೆ ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕಿನ್ನಿಗೋಳಿ ಹಾಗೂ ಕೈಕಂಬದ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ಪರ್ಧೆಗಳಲ್ಲಿಯೂ ಬಹುಮಾನಗಳನ್ನು ಗೆದ್ದುಕೊಂಡಿದ್ದಾಳೆ.
ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಉಚ್ಚಿಲ ದಸರಾದಲ್ಲಿ ಶಾರದೆಯ ವಿಭಿನ್ನ ವೇಷಭೂಷಣದೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾಳೆ.
ಪ್ರಸ್ತುತ ಪದ್ಮಲತಾ ಅವರ ಸಹಕಾರದೊಂದಿಗೆ 'ವಾಯ್ಸ್ ಆಫ್ ಆರಾಧನಾ' ತಂಡದಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವ ಈಕೆ, ಜನವರಿ ಹಾಗೂ ಮಾರ್ಚ್ ತಿಂಗಳ ವಿಜೇತರಲ್ಲಿ ಒಬ್ಬಳಾಗಿದ್ದಾಳೆ. ತಂಡದ ವಾಟ್ಸ್‌ಆ್ಯಪ್ ಬಳಗದಲ್ಲಿ ದಿನಕ್ಕೊಂದು ಗಾದೆ ಮಾತು, ಒಗಟು, ಶುಭ ನುಡಿ, ಹಾಡು ಹಾಗೂ ಅಭಿನಯ ಗೀತೆಗಳನ್ನು ಪ್ರಸ್ತುತಪಡಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇವಳ ಪ್ರತಿಭೆಯನ್ನು ಗುರುತಿಸಿ ಬೆಂಗಳೂರಿನ ಕಲಾವಿದರ ರಕ್ಷಣಾ ವೇದಿಕೆಯು 2025ರಲ್ಲಿ 'ಸುವರ್ಣ ಕರ್ನಾಟಕ ಬಾಲ ಕಲಾ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಲಯನ್ಸ್ ಕ್ಲಬ್ ಕಾರ್ಕಳ ಘಟಕದ ಉದ್ಘಾಟನಾ ಸಮಾರಂಭದಲ್ಲಿಯೂ ಇವಳನ್ನು ಸನ್ಮಾನಿಸಲಾಗಿದೆ.
ಅಭಿಮತ ಟಿವಿ ವಾಹಿನಿ ಹಾಗೂ ರೇಡಿಯೋ ಸಾರಂಗ್ 107.8 ಕಾರ್ಯಕ್ರಮಗಳಲ್ಲಿಯೂ ಚಾತುರ್ಯ ಭಾಗವಹಿಸಿದ್ದಾಳೆ. 2026ರ ಮಾರ್ಚ್ ತಿಂಗಳಲ್ಲಿ ಕಟೀಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ. ಪ್ರಸ್ತುತ ಶ್ರಾವ್ಯ ಕಿಶೋರ್ ಕಟೀಲು ಅವರಿಂದ ಭರತನಾಟ್ಯ, ರಾಜೇಶ್ ಕಟೀಲ್ ಹಾಗೂ ಅರುಣಾ ರಾವ್ ಕಟೀಲ್ ಅವರಿಂದ ಯಕ್ಷಗಾನ, ಭಜನೆ ಮತ್ತು ಕುಣಿತ ಭಜನೆ ಕಲಿಯುತ್ತಿದ್ದಾಳೆ. ಅಲ್ಲದೆ ಈಶ್ವರ್ ಕಟೀಲ್ ಹಾಗೂ ಮೊರ್ಗನ್ ವಿಲೀಮ್ಸ್ ಅವರಿಂದ ಕರಾಟೆ ತರಬೇತಿಯನ್ನೂ ಪಡೆಯುತ್ತಿದ್ದಾಳೆ. ಶಾಲೆಯ ಅಧ್ಯಾಪಕರು, ಮನೆಯವರು ಹಾಗೂ ವಾಯ್ಸ್ ಆಫ್ ಆರಾಧನಾ ತಂಡದ ಪ್ರೋತ್ಸಾಹದೊಂದಿಗೆ ಈ ಬಾಲಪ್ರತಿಭೆ ನಿರಂತರ ಸಾಧನೆಯ ಹಾದಿಯಲ್ಲಿದ್ದಾಳೆ.