ಮೂಡುಬಿದಿರೆ: ರಾಜ್ಯದ ಸಾಂಸ್ಕೃತಿಕ ಪರಂಪರೆಯಾದ ಕಂಬಳವನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಕುರಿತು ಜೂನ್ 20ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮುಖ್ಯಮಂತ್ರಿಗಳ ಆಶಯದಂತೆ ಈ ಸಭೆ ಆಯೋಜಿಸಲಾಗಿದೆ.

ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಇದರ ಅಧಿಕೃತ ಮಾಹಿತಿ ನೀಡಲಾಗಿದ್ದು, ಸಭೆಯಲ್ಲಿ ಭಾಗವಹಿಸಲು ರಾಜ್ಯ ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ನೇತೃತ್ವದ ವಿಶೇಷ ನಿಯೋಗ ಮೈಸೂರಿಗೆ ತೆರಳಲಿದೆ.

ಸುಪ್ರೀಂ ಕೋರ್ಟ್ ತೀರ್ಪು-ಕಂಬಳಕ್ಕೆ ಐತಿಹಾಸಿಕ ಜಯ: ಕಂಬಳ ಕೇವಲ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಲ್ಲ, ಅದು ಇಡೀ ದೇಶದ ಹೆಮ್ಮೆ ಎಂದು ಸಾರಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ನಡೆಸಬಾರದು ಎಂದು ಕೋರಿ ಪೇಟಾ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ವಜಾಗೊಳಿಸಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, "ರಾಜ್ಯದ ಇತರ ಭಾಗಗಳಲ್ಲಿ ಈ ಸಂಸ್ಕೃತಿಯನ್ನು ಪ್ರದರ್ಶಿಸಲು ಬಯಸಿದರೆ ತಪ್ಪೇನಿದೆ? ರಾಜ್ಯದ ಬೇರೆ ಭಾಗದ ಜನರೂ ಈ ಕ್ರೀಡೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳಲಿ. ಅದನ್ನು ಏಕೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು?" ಎಂದು ಪ್ರಶ್ನಿಸಿದರು.

ಕಂಬಳದ ಉಳಿವಿಗಾಗಿ ನಡೆಸಿದ ದಶಕಗಳ ಕಾನೂನು ಹೋರಾಟಕ್ಕೆ ಇದರಿಂದ ಜಯ ಸಿಕ್ಕಿದ್ದು, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದ ತಂಡದ ಶ್ರಮ ಫಲ ನೀಡಿದೆ. ಕಂಬಳ ಅಸೋಸಿಯೇಷನ್, ಸಮಿತಿ, ವ್ಯವಸ್ಥಾಪಕರು, ಕೋಣಗಳ ಯಜಮಾನರು ಮತ್ತು ಕಂಬಳ ಪ್ರೇಮಿಗಳ ನಿರಂತರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ.

ಶಿವಮೊಗ್ಗ ಸಿದ್ಧತೆ , ಕನಕಪುರದಲ್ಲೂ ಒಲವು : ಬೆಂಗಳೂರಿನಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಈಗಾಗಲೇ ಕಂಬಳ ಆಯೋಜನೆಯಾಗಿದ್ದು, ಇದರಿಂದ ಸ್ಫೂರ್ತಿಗೊಂಡ ಹಲವು ಜಿಲ್ಲೆಗಳು ಕಂಬಳ ನಡೆಸಲು ಮುಂದಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ಆಯೋಜನೆಗೆ ಪೂರ್ವ ತಯಾರಿ ನಡೆಯುತ್ತಿದ್ದು, ಮುಂದಿನ ಕೆಲವು ತಿಂಗಳಲ್ಲಿ ಕೂಟ ನಡೆಯಲಿದೆ. ಗುರುಪುರ ಕಂಬಳದ ಪ್ರೇರಣೆಯಿಂದ ಮಾಜಿ ಸಂಸದ ಡಿ.ಕೆ. ಸುರೇಶ್ ಕನಕಪುರದಲ್ಲೂ ಕಂಬಳ ಆಯೋಜಿಸುವ ಪ್ರಸ್ತಾಪ ಮುಂದಿಟ್ಟಿದ್ದು, ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

ದಸರಾ ಮಹೋತ್ಸವದಲ್ಲಿ ಕಂಬಳಕ್ಕೆ ಅವಕಾಶ ದೊರೆತರೆ, ಕರಾವಳಿಯ ಸಂಪ್ರದಾಯ ರಾಜ್ಯದ ಪ್ರಮುಖ ಸಾಂಸ್ಕೃತಿಕ ಉತ್ಸವದ ಭಾಗವಾಗುವ ಮಹತ್ವದ ಹೆಜ್ಜೆಯಾಗಿ ದಾಖಲಾಗಲಿದೆ ಎಂದು ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.