ಕಲೆ, ಸಂಗೀತ, ನೃತ್ಯ ಹಾಗೂ ನಟನಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಬಹುಮುಖ ಪ್ರತಿಭೆ ದೀಕ್ಷ್ಣಾ ಕಲ್ಮಾಡಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ನವೀನ್ ಕಲ್ಮಾಡಿ ಮತ್ತು ಉಷಾ ನವೀನ್ ದಂಪತಿಯ ಪುತ್ರಿಯಾಗಿರುವ ದೀಕ್ಷ್ಣಾ ಕಲ್ಮಾಡಿ ಪ್ರಸ್ತುತ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಣದ ಜೊತೆ ಜೊತೆಯಲ್ಲೇ ಭರತನಾಟ್ಯ ಹಾಗೂ ಸಂಗೀತ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸ್ಟಾರ್ ಕಿಡ್ ಅವಾರ್ಡ್ ಪ್ರೋಗ್ರಾಂನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಇವರು, ಕೆ.ಎಸ್.ಇವೆಂಟ್ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಮೆಚ್ಚುಗೆ ಪತ್ರ ಪಡೆದಿದ್ದಾರೆ. ರಾಯಚೂರಿನ ಬೆಳಕು ಟ್ರಸ್ಟ್ ವತಿಯಿಂದ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ಗಾನಕೋಗಿಲೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪದ್ಮಶ್ರೀ ಮೇಡಂ ಹಾಗೂ ವಾಯ್ಸ್ ಆಫ್ ಆರಾಧನಾ ಬಳಗದ ವತಿಯಿಂದ ಮಂಗಳೂರಿನ ಸ್ಪಂದನ ವಾಹಿನಿಯಲ್ಲಿ ಪ್ರಸಾರವಾದ ರೈಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ 4 ಬಾರಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸಾಯಿ ಈಶ್ವರ್ ಟಿ.ವಿ ಶಂಕರಪುರ ಹಾಗೂ ಚಾನೆಲ್ 9 ಮಂಗಳೂರು ವಾಹಿನಿಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಕಲಾಪ್ರತಿಭೆ ಪ್ರದರ್ಶಿಸಿದ್ದಾರೆ. ಬಾರ್ಕೂರು, ಬನ್ನಂಜೆ, ವಿಟ್ಲ, ಕಟೀಲು, ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆ ಹಲವಾರು ಸ್ಟೇಜ್ ಪ್ರೋಗ್ರಾಂಗಳನ್ನು ನೀಡಿದ್ದಾರೆ.

ಕಲಶಿಲ್ಪ ತಂಡದ ವತಿಯಿಂದ ನಮ್ಮ ಟಿ.ವಿ. ವಾಹಿನಿಯ ಬಲೇ ಬುಲಿಪಾಲೆ ಕಾರ್ಯಕ್ರಮದಲ್ಲಿ ಸಯಮಿ ಅವಳಿ ಪಾತ್ರ ಸೇರಿದಂತೆ ಹಲವು ಪಾತ್ರಗಳನ್ನು ನಿರ್ವಹಿಸಿರುವ ಇವರು, ರಂಗಭೂಮಿ ಹಾಗೂ ಚಿತ್ರರಂಗದ ಪ್ರಮುಖರಾದ ದೇವದಾಸ್ ಕಪಿಕಾಡ್ ಸರ್ ಅವರಿಂದ ಮೆಚ್ಚುಗೆ ಪಡೆದು ದ್ವಿತೀಯ ವಿಜೇತರಾಗಿದ್ದಾರೆ. ಶಾಲಾ ದಿನಗಳಲ್ಲೇ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದ ಇವರು, 2022-23ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ 2023-24ರ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ರೇಡಿಯೋ ಮಣಿಪಾಲದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಯೋಗದಲ್ಲಿ ಮೂಡಿಬಂದ ಚಿಣ್ಣರ ದನಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.

ಉಡುಪಿಯಲ್ಲಿ ನಡೆದ ಮಿಸಸ್ ಕೋಸ್ಟಲ್ 2024 ಬ್ಯೂಟಿ ಪೆಜೆಂಟ್ ಸ್ಪರ್ಧೆಯಲ್ಲಿ ಹಾಗೂ ಸ್ಪಂದನ ವಾಹಿನಿಯ ನಮ್ಮೂರ ಜಾಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಸ್ಕೂಲ್ ಲೀಡರ್ ಚಲನಚಿತ್ರದಲ್ಲೂ ಅಭಿನಯಿಸಿರುವ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ಲಭಿಸಿದೆ. ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ನೀಡುತ್ತಿರುವ ಎರಡನೇ ವರ್ಷದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ನಿರಂತರ ಕಲಾ ಸೇವೆಯನ್ನು ಗುರುತಿಸಿ 2026ರಲ್ಲಿ ಸತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.