ಮಾಡೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಾಡೂರು ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಮಾಡೂರು ಶಾಖೆಯಲ್ಲಿ ಜರುಗಿತು.
ಸಂಘದ ಸದಸ್ಯರಾದ ಬಿ.ಎಸ್. ಭಾಸ್ಕರ್, ಸೀತಾರಾಮ ಪೂಜಾರಿ, ಗೋಪಾಲ ಯು. ಹಾಗೂ ಇಸ್ಮಾಯಿಲ್ ಅಚ್ಚಬ್ಬ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ.ಎಸ್. ಭಾಸ್ಕರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸದಸ್ಯ ಗೋಪಾಲ ಯು. ಮಾತನಾಡಿ, ಸೇವಾ ಮನೋಭಾವದಿಂದ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವು ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು. ಸದಸ್ಯ ಗಣೇಶ್ ಭಂಡಾರಿ ಮಾತನಾಡಿ, ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ದೈನಂದಿನ ವ್ಯವಹಾರಕ್ಕೆ ಪೂರಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿತ್ತರಂಜನ್ ಬೋಳಾರ್ ಮಾತನಾಡಿ, ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ 500 ದಿನಗಳ ಠೇವಣಿಗೆ ಶೇ. 10.00 ಹಾಗೂ 1000 ದಿನಗಳ ಠೇವಣಿಗೆ ಶೇ. 10.50ರಷ್ಟು ವಿಶೇಷ ಬಡ್ಡಿ ದರ ನೀಡಲಾಗುತ್ತಿದೆ. ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂಗೆ ಗರಿಷ್ಠ 12,000 ರೂ.ವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು. ಸಂಘದ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್‌ಟಿಜಿಎಸ್ ಸೇರಿದಂತೆ ಎಲ್‌ಐಸಿ, ಕೇರ್, ಇಫ್ಕೋಟೋಕಿಯ ಮುಂತಾದ ಕಂಪನಿಗಳ ವಿಮಾ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಸಂಘದ ನಿರ್ದೇಶಕ ಆನಂದ್ ಎಸ್. ಕೊಂಡಾಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಶಾಖಾ ಸಿಬ್ಬಂದಿ ಮೇಘಶ್ರೀ ಪಿ.ಎನ್. ಸ್ವಾಗತಿಸಿದರು. ಪ್ರದೀಪ್ ಕುಮಾರ್ ಕೆ. ವಂದಿಸಿದರು. ಪ್ರಭಾರ ಶಾಖಾಧಿಕಾರಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.