ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾರೂರು-ಪುಚ್ಚೆಮೊಗರು ನೆತ್ತೋಡಿ ಪರಿಸರದಲ್ಲಿ ಹಾದು ಹೋಗುವ ಪಲ್ಗುಣಿ ನದಿಯ ಪ್ರದೇಶದಲ್ಲಿ ಮರಳನ್ನಯ ತೆಗೆಯಲು ಆಕ್ಷೇಪ ಬಂದ ಹಿನ್ನಲೆಯಲ್ಲಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಾಯಂಕಾಲ ಜಂಟಿ ಸರ್ವೇ ನಡೆಸಿದರು.

ಇಲಾಖೆಯ ಭೂ ವಿಜ್ಞಾನಿಗಳಾದ ಸತ್ಯಭಾಮ, ಪವನ್ ವಿ. ಹಾಗೂ ಕಂದಾಯ ಇಲಾಖೆಯ ಪರವಾಗಿ ಕಂದಾಯ ನಿರೀಕ್ಷಕ ರವಿ ಮಲ್ಯ ಸರ್ವೆ ನಡೆಸಿದರು.

ಬೆಳ್ತಂಗಡಿ ತಾಲೂಕಿನ ಪ್ರದೇಶದಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಮೂಡುಬಿದಿರೆ ತಾಲೂಕಿನಲ್ಲಿ ನದಿ ದಡದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದೆ. ನದಿ ತಟದಲ್ಲಿ ಜೆಸಿಐ ಯಂತ್ರ ಬಳಸಿ ಸಮತ್ತಟ್ಟು ಮಾಡಲಾಗಿದೆ. ಅಲ್ಲದೇ ರಸ್ತೆಯನ್ನೂ ನದಿಯಲ್ಲಿ ನಿರ್ಮಿಸಲಾಗಿದೆ.

ನದಿ ತಟದಲ್ಲಿರುವ ದೊಡ್ಡ ಮರಗಳನ್ನು ತೆರೆವುಗೊಳಿಸಲಾಗಿದೆ ಎಂದು ರೈತರು ಆರೋಪಿಸಿದರು. ಈ ಆವಾಂತರದಿಂದಾಗಿ ಪರಿಸರದಲ್ಲಿ ನೆರೆ ಭೀತಿ ಉಂಟಾಗುವ ಸಂಭವವಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ನದಿಯಲ್ಲಿ ಯವುದೇ ರಸ್ತೆಯನ್ನು ನಿರ್ಮಿಸಲಾಗಿಲ್ಲ ಎಂದು ಅಧಿಕಾರಿ ಪವನ್ ಹೇಳಿಕೆ ನೀಡಿದಾಗ, ರೈತರು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿದ ರೈತ ಮುಖಂಡ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಕಾನೂನು ಉಲ್ಲಂಘಿಸಿ ಮರಳುಗಾರಿಕೆ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ ಅಧಿಕಾರಿಗಳು ಗಣಿ ಮಾಫಿಯದವರ ಜೊತೆಗೂಡಿ ಜನರ ಪರವಾಗಿ ಸ್ಪಂದಿಸುತ್ತಿಲ್ಲ. ರೈತರು ದಾಖಲೆ ಕೇಳಿದರೆ ಸತಾಯಿಸುತ್ತಿದ್ದಾರೆ. ಮಹಜರಿನ ಮಾಹಿತಿ ಕೇಳಿದರೂ ಕೊಡಿತ್ತಿಲ್ಲ. ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದ್ದು, ಅದಕ್ಕೆ ಭೂಪರಿವರ್ತನೆ ಆಗಿದೆಯೇ ಎಂದು ಕೇಳಿದರೆ ಅದಕ್ಕೂ ಅಧಿಕಾರಿಗಳಿಂದ ಉತ್ತರವಿಲ್ಲ. ಮರಳುಗಾರಿಕೆಯಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಗಣಿ ಮಾಫಿಯದವರೊಂದಿಗೆ ಶಾಮೀಲಾಗಿದ್ದಾರೆ ಎಂಬುದು ಸಾಬೀತಾಗಿದೆ. ಅಧಿಕಾರಿಗಳ ನಡೆಯ ವಿರುದ್ಧ ಶೀಘ್ರದಲ್ಲೇ ಜಿಲ್ಲಾ ಮಟ್ಟದಲ್ಲಿ ರೈತರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ದೂರುದಾರ ಎ ರೋಹನ್ ಕಾರ್ಡೋಜ, ಮುಖಂಡ ಜಾಯ್ಲಸ್ ಡಿಸೋಜ ತಾಕೋಡೆ, ಮೂಡುಬಿದಿರೆ ಪೊಲೀಸ್ ಉಪನೀರಿಕ್ಷಕಿ ಪ್ರತಿಭಾ, ಕಂದಾಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ರೈತರು, ಸ್ಥಳೀಯರು ಉಪಸ್ಥಿತರಿದ್ದರು.