ಮೂಡುಬಿದಿರೆ: ಮಂಗಳೂರು ವಿವಿ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ನೀಡುವ ಪ್ರತಿಷ್ಠಿತ ಕನಕ ಪುರಸ್ಕಾರವನ್ನು ಮೂಡುಬಿದಿರೆಯ ಉದಯೋನ್ಮುಖ ಗಾಯಕ ನಿಹಾಲ್ ಕಾಲೇಜು ವಿಭಾಗದಲ್ಲಿ ಆಯ್ಕೆಯಾಗಿದ್ದು, ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. 025-26ನೇ ಸಾಲಿನ ‘ಕನಕ ಪುರಸ್ಕಾರ ಪ್ರದಾನ’ ಕಾರ್ಯಕ್ರಮವು ಮೇ 6ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ವಹಿಸಿದ್ದರು. “ಆಧುನಿಕ ದೃಷ್ಟಿಕೋನದಲ್ಲಿ ಕನಕ ಸಾಹಿತ್ಯ” ವಿಷಯದ ಕುರಿತು ಡಾ. ಬಿ.ಎಸ್. ಅನಿಲಕುಮಾರ ಬೊಮ್ಮಾಘಟ್ಟ ವಿಶೇಷ ಉಪನ್ಯಾಸ ನೀಡಿದರು.
ನಿಹಾಲ್ ಅವರಿಗೆ ಈ ಗೌರವ ದೊರೆಯುತ್ತಿರುವುದು ಇದು ಎರಡನೇ ಬಾರಿ ಎಂಬುದು ಗಮನಾರ್ಹ ಸಾಧನೆಯಾಗಿದೆ. ಮೂಡುಬಿದಿರೆಯ ಪೇಪರ್ ಮಿಲ್ ನಿವಾಸಿಗಳಾದ ಸುಕೇಶ್ ಮತ್ತು ಮಲ್ಲಿಕಾ ದಂಪತಿಯ ಪುತ್ರನಾದ ನಿಹಾಲ್, ಪ್ರಸ್ತುತ ಆಳ್ವಾಸ್ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿರುವ ಅವರು, ವಿದ್ವಾನ್ ಯಶವಂತ್ ಎಂ.ಜಿ. ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರೌಢಶಾಲಾ ವಿಭಾಗದಲ್ಲಿ ‘ಕನಕ ಪುರಸ್ಕಾರ’ ಪಡೆದಿದ್ದ ನಿಹಾಲ್, ಈ ಬಾರಿ ಕಾಲೇಜು ವಿಭಾಗದಲ್ಲೂ ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ಸತತ ಸಾಧನೆ ಮೆರೆದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರ ಪ್ರತಿಭೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ‘ಕಿಶೋರ್ ಕುಮಾರ್ ವಿಶ್ವದಾಖಲೆ’ ಗಾಯನ ಕಾರ್ಯಕ್ರಮದಲ್ಲೂ ಭಾಗವಹಿಸಿ ಮೆಚ್ಚುಗೆ ಪಡೆದಿದ್ದರು. ಗಾಯನದ ಜೊತೆಗೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವಲ್ಲಿಯೂ ಅವರು ವಿಶೇಷ ಪ್ರತಿಭೆ ಹೊಂದಿದ್ದಾರೆ.