ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ರಾತ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಲಾಡಿ, ಪ್ರಾಂತ್ಯ, ಕರಿಂಜೆ, ಕಲ್ಲಬೆಟ್ಟು, ಸುವರ್ಣನಗರ ಹಾಗೂ ಕೋಟೆಬಾಗಿಲು ಮುಂತಾದ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಕುಡಿಯುವ ನೀರು ಮತ್ತು ದೈನಂದಿನ ಕೆಲಸಗಳಿಗೆ ತೀವ್ರ ಅಡಚಣೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ ಎಂಬುದು ಜನರ ಮುಖ್ಯ ಆರೋಪವಾಗಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಅಶ್ರಫ್, "ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಇದೆ. ಈ ಹಿಂದೆಯೇ ಕೋಟೆಬಾಗಿಲು ಭಾಗದಲ್ಲಿ ಲೋ ವೋಲ್ಟೇಜ್ ಮತ್ತು ತಂತಿ ಉರಿದು ಹೋಗಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಲ್ ವಸೂಲಿ ಮಾಡಲು ಬರುವ ಅಧಿಕಾರಿಗಳಿಗೆ ಜನರ ಸಂಕಷ್ಟಗಳು ಕಾಣುತ್ತಿಲ್ಲ," ಎಂದು ಆರೋಪಿಸಿದರು..

ಶಾಸಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಯಿತು. ಅಧಿಕಾರಿಗಳು ಜನರ ಕರೆಗಳನ್ನು ಸ್ವೀಕರಿಸದೆ ಇರುವುದು ಅಥವಾ ನಂಬರ್‌ಗಳನ್ನು ಬ್ಲಾಕ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಸಂಕಷ್ಟವನ್ನು ಹೀಗೆ ಹಂಚಿಕೊಂಡಿದ್ದಾರೆ. "ಮನೆಯಲ್ಲಿ ನಾಲ್ಕು ದಿನಗಳಿಂದ ನೀರಿಲ್ಲದೆ ಶೌಚಾಲಯಕ್ಕೂ ತೊಂದರೆಯಾಗಿದೆ. ಅಡುಗೆ ಮಾಡಲು, ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕತ್ತಲೆಯಲ್ಲಿ ಕಳೆಯುವುದು ಕಷ್ಟಕರವಾಗಿದೆ. ಅಧಿಕಾರಿಗಳನ್ನು ಕೇಳಿದರೆ ಮರ ಬಿದ್ದಿದೆ, ಕಂಬ ಕಟ್ ಆಗಿದೆ ಎಂಬ ಸಬೂಬುಗಳನ್ನು ನೀಡುತ್ತಿದ್ದಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ‌ ಎಂದಿದ್ದಾರೆ.

ರಾತ್ರಿ 10 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು. ಒಂದು ವೇಳೆ ನಾಳೆ ಬೆಳಿಗ್ಗೆ 10:30ರ ಒಳಗೆ ಶಾಶ್ವತ ಪರಿಹಾರ ಸಿಗದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.