ಮೂಡುಬಿದಿರೆ: ಸಾಮಾಜಿಕ ಜಾಗೃತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಮೂಡುಬಿದಿರೆಯ ಸಕಾರಾತ್ಮಕ ಅಭಿವೃದ್ಧಿ ಕುರಿತು ಚರ್ಚಿಸುವ ಉದ್ದೇಶದಿಂದ ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಇತ್ತೀಚೆಗೆ ಮೂಡುಬಿದಿರೆಯ ಅರಿಹಂತ್ ಆಹಾರ ಪಾರ್ಟಿ ಹಾಲ್‌ನಲ್ಲಿ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಭೆಯಲ್ಲಿ ಸುಮಾರು 55ಕ್ಕೂ ಹೆಚ್ಚು ಕ್ರಿಯೇಟರ್ಸ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್, ಮೀಡಿಯಾ ಪ್ರತಿನಿಧಿಗಳು, ಬ್ಲಾಗರ್ಸ್, ರೀಲ್ಸ್ ಮೇಕರ್ಸ್ ಹಾಗೂ ಸ್ವಯಂಸೇವಕರು ಭಾಗವಹಿಸಿ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

ನಮ್ಮ ಮೂಡುಬಿದಿರೆ ಫೋರಂನ ಅಕ್ಷಯ್ ಕೆ ಜೈನ್ ಮಾತನಾಡಿ, ಯಾರನ್ನೂ ವೈಯಕ್ತಿಕವಾಗಿ ಗುರಿ ಮಾಡುವುದು ಅಥವಾ ಆರೋಪಿಸುವುದು ತಮ್ಮ ಉದ್ದೇಶವಲ್ಲ. ಸಾಮಾಜಿಕ ಜಾಲತಾಣಗಳನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು, ಮೂಡುಬಿದಿರೆಯನ್ನು ಎಲ್ಲದರಲ್ಲೂ ಉತ್ತಮವಾಗಿಸಬೇಕು ಎಂದು ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವಾ ಮಾತನಾಡಿ, ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಕ್ಕೆ ಅಪಾರ ಶಕ್ತಿ ಇದೆ. ಅದನ್ನು ಸಮಾಜದ ಒಳಿತಿಗಾಗಿ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು. ಸಭೆಯಲ್ಲಿ ಹಲವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ನಮ್ಮ ಮೂಡುಬಿದಿರೆ ಫೋರಂ ಸದಸ್ಯರಾದ ಅಡ್ವೊಕೇಟ್ ಇರ್ಷಾದ್, ಯಾಸೀರ್ ಹಾಗೂ ಸಂಪತ್ ದೇವಾಡಿಗ ಉಪಸ್ಥಿತರಿದ್ದರು.