ಮೂಡುಬಿದಿರೆ: ಪಡುಕೋಣಾಜೆಯಲ್ಲಿರುವ ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ 'ಕೇವಲ ಮನೆ'ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಲಾಯಿತು.ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರೆದ 'ಹೇ ರಾಮ್' ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಾ.ಮೊಗಸಾಲೆ, ಕನ್ನಡ ಸಾಹಿತ್ಯ ಈಗ ಎಡ ಮತ್ತು ಬಲದಲ್ಲಿ ಸಿಲುಕಿ ಉಸಿರು ಕಟ್ಟಿದ ಸ್ಥಿತಿಯಲ್ಲಿದೆ. ಈ ನಡುವೆ ಕಾವ್ಯದ ಘನತೆ ಕುಂದುತ್ತಿದೆ. ಕಾವ್ಯದ ಜೊತೆ ಸಂವಾದ ಮತ್ತು ಸಂವಹನ ಇಲ್ಲದಾಗುತ್ತಿದೆ. ಪಿಎಚ್‌ಡಿ ಪ್ರಬಂಧಕ್ಕೆ ಮತ್ತು ಸಾಹಿತ್ಯ ವಿದ್ಯಾರ್ಥಿಗಳ ಕಲಿಕೆಗೆ ಮಾತ್ರ ಕವಿತೆ ಸೀಮಿತ ಎಂಬಂತಾಗಿದೆ ಎಂದರು. ಬದುಕು ಅನೇಕ ಪಾಠಗಳನ್ನು ಕಲಿಸಿದ್ದು, ಅನುಭವದ ಆಧಾರದಲ್ಲಿ ಅದನ್ನೆಲ್ಲ ದಾಖಲಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.

ಸಂಕಲನದ 7 ಕವನಗಳನ್ನು ಸಾಹಿತಿಗಳು, ಅಧ್ಯಾಪಕರು ಮತ್ತು ಸಾಹಿತ್ಯ ವಿದ್ಯಾರ್ಥಿಗಳು ಓದಿ ಕವಿತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಡಿ.ವಿ ಪ್ರಕಾಶ್, ಸುಧಾರಾಣಿ, ಹರೀಶ್ ಟಿ.ಜಿ, ರವಿಶಂಕರ್ ಜಿ.ಕೆ, ಅಮೃತಾ, ಅಭ್ಯುದಯ ಮತ್ತು ಕವಿತಾ ಕೂಡ್ಲು ಕವನ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ, ಲೇಖಕ ಜನಾರ್ದನ ಭಟ್ ಮಾತನಾಡಿ, ಸಾಹಿತ್ಯ ಇರುವುದೇ ಧರ್ಮಬೋಧನೆಗೆ. ಪಾಶ್ಚಾತ್ಯದಲ್ಲೂ ಅದೇ ಉದ್ದೇಶದಿಂದ ಸಾಹಿತ್ಯ ರಚನೆಯಾಗಿತ್ತು. ಕಾವ್ಯಕ್ಕೆ ತತ್ವಶಾಸ್ತ್ರದ ಹಿನ್ನೆಲೆ ಇದ್ದು ಬಸವಣ್ಣ, ಅಲ್ಲಮಪ್ರಭು ಮುಂತಾದವರೆಲ್ಲ ದೇಹವೇ ದೇವರು ಎಂದಿದ್ದರು ಎಂದರು. ಲೇಖಕ ಬಿ.ಪಿ ಸಂಪತ್ ಕುಮಾರ್ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮಾತನಾಡಿದರು. ಸಮವಸರಣ ಸಾಹಿತ್ಯ ವೇದಿಕೆಯ ಸ್ಥಾಪಕರಾದ ಟಿ.ಎನ್ ಖಂಡಿಗೆ ಸ್ವಾಗತಿಸಿದರು. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.