ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು – ಮೂಡುಬಿದಿರೆ ಘಟಕದ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಭಾನುವಾರ ಸಮಾಜ ಮಂದಿರದಲ್ಲಿ ಹಸ್ತಾಂತರಿಸಲಾಯಿತು.

ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪುಚ್ಚೆಮೊಗರಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಂಕಷ್ಟಕ್ಕೆ ಒಳಗಾದ ದೈವ ಪರಿಚಾರಕರಾದ ಸುನಿಲ್ ಶೆಟ್ಟಿ, ಯಶೋಧರ, ದಿನೇಶ್ ಅವರ ಚಿಕಿತ್ಸಾ ವೆಚ್ಚ ಹಾಗೂ ಸದಾಶಿವ ಶೆಟ್ಟಿಗಾರ್ ಅವರ ವೈದ್ಯಕೀಯ ನೆರವಿಗೆ ಕಾರ್ಯಕ್ರಮದಲ್ಲಿ ಧನಸಹಾಯ ನೀಡಲಾಯಿತು.

ಇದೇ ಸಂದರ್ಭದಲ್ಲಿ ಮಾಸ್ತಿಕಟ್ಟೆ ನೆಲ್ಲಿಗುಡ್ಡೆ ನಿವಾಸಿಯಾದ ತೀವ್ರ ಬಡತನದಲ್ಲಿರುವ ಮಮತಾ ಹರೀಶ್ ಅವರ ಮಗಳ ವಿವಾಹಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ಘಟಕದ ಗೌರವಾಧ್ಯಕ್ಷ ಶ್ರೀಪತಿ ಭಟ್, ಕೇಂದ್ರೀಯ ಘಟಕದ ಪ್ರೇಮಾನಾಥ್ ಮಾರ್ಲ ಕೆ., ನೀಲೇಶ್ ಶೆಟ್ಟಿ, ಪದಾಧಿಕಾರಿಗಳಾದ ಪ್ರದೀಪ್ ಜೈನ್ ಬಾವದಗುತ್ತು, ಪುನೀತ್ ಕಟ್ಟೆಮಾರ್, ಶಾಂತರಾಮ್ ಕುಡ್ವ, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್, ಸಂತೋಷ್ ಶೆಟ್ಟಿ ಹಾಗೂ ತಾಕೊಡೆ ಬರ್ಕೆ ಅಮ್ಮಿ ಕೋಟ್ಯಾನ್ ಉಪಸ್ಥಿತರಿದ್ದರು. ಸಂಚಾಲಕ ರವಿಪ್ರಸಾದ್ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.