ಮೂಡುಬಿದಿರೆ: ಅಪಾರ ಸ್ಮರಣ ಶಕ್ತಿ ಹಾಗೂ ಬಹುಮುಖ ಪ್ರತಿಭೆಯ ಮೂಲಕ ಕರಾವಳಿ ಭಾಗದಲ್ಲಿ ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಹೆಗ್ಗಳಿಕೆಗೆ 7 ವರ್ಷದ ಬಾಲಕಿ ಶ್ರೀಮಾನ್ಯಾ ಭಟ್ ಕಡಂದಲೆ ಪಾತ್ರಳಾಗಿದ್ದಾಳೆ.
ಕಡಂದಲೆ ಸುಭ್ರಮಣ್ಯ ಭಟ್ ಮತ್ತು ಶ್ರೀವಿದ್ಯಾ ಭಟ್ ದಂಪತಿಯ ಸುಪುತ್ರಿಯಾದ ಈಕೆ, ಕೆ. ಜಿ ನಾರಾಯಣ ಭಟ್ ಕಡಂದಲೆ, ರಾಧಾ ಭಟ್ ಹಾಗೂ ಕಟೀಲು ಅನಂತ ಪದ್ಮನಾಭ ಆಸ್ರಣ್ಣ, ವಸಂತಿ ಆಸ್ರಣ್ಣ ದಂಪತಿಗಳ ಮೊಮ್ಮಗಳಾಗಿದ್ದಾಳೆ. ಪ್ರಸ್ತುತ ಕಟೀಲಿನ ಶ್ರೀದುರ್ಗಾಪರಮೇಶ್ವರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ ಶಿಕ್ಷಣ ಮತ್ತು ಕಲೆ ಎರಡರಲ್ಲೂ ಮುಂಚೂಣಿಯಲ್ಲಿದ್ದಾಳೆ.
ಅಪ್ರತಿಮ ಸ್ಮರಣ ಶಕ್ತಿ- ಕಲಾ ಆಸಕ್ತಿ ತನ್ನ 11 ತಿಂಗಳ ಎಳೇ ಪ್ರಾಯದಿಂದಲೇ ಪ್ರತಿಭೆ ಪ್ರದರ್ಶಿಸಲು ಆರಂಭಿಸಿದ ಶ್ರೀಮಾನ್ಯಾ ಭಟ್, ಹಿಂದೂ ಧರ್ಮದ ಸಾಂಸ್ಕೃತಿಕ ವಿಷಯಗಳ ಮೇಲೆ ಅಸಾಧಾರಣ ಹಿಡಿತ ಸಾಧಿಸಿದ್ದಾಳೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಪ್ರದಾಯದ 60 ಸಂವತ್ಸರಗಳು, 27 ನಕ್ಷತ್ರಗಳು, 12 ರಾಶಿಗಳು, 12 ತುಳು ಮಾಸಗಳು, 6 ಋತುಗಳು, 15 ತಿಥಿಗಳು ಹಾಗೂ ವಾರದ 7 ಪ್ರತಿ ನಾಮಗಳನ್ನು ಈಕೆ ಲೀಲಾಜಾಲವಾಗಿ ಹೇಳುತ್ತಾಳೆ. ಇದರೊಂದಿಗೆ ಭಗವದ್ಗೀತೆ, ವಿಷ್ಣು ಸಹಸ್ರನಾಮ, ದೇವರ ಮಂತ್ರಗಳು, ಸುಭಾಷಿತ ಪಠಣ, ಕಥೆ ಹೇಳುವುದು, ಮಾತುಗಾರಿಕೆ, ಭಾಷಣ, ಡ್ರಾಯಿಂಗ್, ಕೃಷ್ಣ ವೇಷ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಕ್ರೀಡೆ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ನಗದು ಸೇರಿದಂತೆ ನೂರಾರು ಬಹುಮಾನಗಳನ್ನು ಗಳಿಸಿದ್ದಾಳೆ.
ವಿವಿಧ ವಾಹಿನಿಗಳಲ್ಲಿ ಪ್ರತಿಭೆ ಅನಾವರಣ ಶ್ರೀಮಾನ್ಯಾ ಭಟ್ ರಾಜ್ಯದ ಪ್ರಮುಖ ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಮೆಚ್ಚಿದ ಬಾಲಕಿಯಾಗಿ ಗುರುತಿಸಿಕೊಂಡಿದ್ದಾಳೆ. ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನ ಫೈನಲ್ ರೌಂಡ್ ಆಡಿಷನ್ ವರೆಗೆ ತಲುಪಿರುವ ಈಕೆ, ಡೈಜಿ ವರ್ಲ್ಡ್ ಟಿವಿ ಚಾನೆಲ್, ನಮ್ಮ ಕುಡ್ಲ ಟಿವಿ, ಸ್ಪಂದನ ಟಿವಿ, ಅಭಿಮತ ಟಿವಿ, ದಾಸ್ ಕುಡ್ಲ ಯೂಟ್ಯೂಬ್ ಚಾನೆಲ್, ತುಳುನಾಡ ವಾರ್ತೆ, ರೇಡಿಯೋ ಮಣಿಪಾಲದ ಚಿಣ್ಣರ ದನಿ ಹಾಗೂ ರೇಡಿಯೋ ಮಂಗಳೂರು ಕಾರ್ಯಕ್ರಮಗಳಲ್ಲಿ ತನ್ನ ಕಲಾ ಪ್ರಾವೀಣ್ಯತೆ ಉಣಬಡಿಸಿದ್ದಾಳೆ. ಆಭರಣ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲೂ ಈಕೆ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ಪ್ರಶಸ್ತಿ-ಪುರಸ್ಕಾರಗಳ ಗರಿ ಇದುವರೆಗೆ 70ಕ್ಕೂ ಹೆಚ್ಚು ಪ್ರಮುಖ ವೇದಿಕೆಗಳಲ್ಲಿ ಭಾಗವಹಿಸಿರುವ ಶ್ರೀಮಾನ್ಯಾ ಭಟ್, ವಿವಿಧ ಸ್ಪರ್ಧೆಗಳಿಂದ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಈಕೆಯ ಕಲಾ ಸಾಧನೆಯನ್ನು ಗುರುತಿಸಿ ಮಕ್ಕಳ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಛೋಟಾ ಚಾಂಪಿಯನ್ ಗಾಯಕಿ ಗೌರವ, ಸೇವಾ ರತ್ನ ಪ್ರಶಸ್ತಿ, ವಿಜಯ ಪಥ ಛೋಟಾ ಚಾಂಪಿಯನ್ ಪ್ರಶಸ್ತಿ, ಸ್ವರ್ಣ ಕಲಾ ಪ್ರಶಸ್ತಿ, ಬಾಲ ಪ್ರತಿಭೋತ್ಸವ ಸಿರಿ ಗೌರವ ಪ್ರಶಸ್ತಿ ಹಾಗೂ ಬೆಂಗಳೂರಿನಲ್ಲಿ ಸಕಲ ಕಲಾ ವಲ್ಲಭಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಶಿವಳ್ಳಿ ಸ್ಪಂದನ ಮಂಗಳೂರು ವಲಯ ಸನ್ಮಾನ ಗೌರವ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ಶಾಲಾ ಕಾಲೇಜು ನುಡಿಹಬ್ಬದಲ್ಲಿ ಈಕೆಯನ್ನು ಸನ್ಮಾನಿಸಲಾಗಿದೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಸತತ 4 ವರ್ಷಗಳಿಂದ ಭಾಗವಹಿಸುತ್ತಿರುವ ಈಕೆ 10 ಬಾರಿ ತಿಂಗಳ ಬಹುಮಾನ ಪಡೆದಿದ್ದು, ಶಾಲಾ ಓದಿನಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾಳೆ.
ಗುರು ಹಿರಿಯರ ಮಾರ್ಗದರ್ಶನ ಶ್ರೀಮಾನ್ಯಾ ಭಟ್ ಪ್ರತಿಭೆಗೆ ಸೂಕ್ತ ಗುರುಗಳ ಮಾರ್ಗದರ್ಶನ ಸಿಕ್ಕಿದೆ. ಸುಶ್ರಾವ್ಯ ಶ್ರೀಕರ ಆಸ್ರಣ್ಣ ಅವರಲ್ಲಿ ಸಂಗೀತ, ವಿಧುಷಿ ಶ್ರಾವ್ಯ ಬಜ್ಪೆ ಅವರಲ್ಲಿ ಭರತನಾಟ್ಯ, ಮೊಗ್ರನ್ ಹಾಗೂ ಈಶ್ವರ್ ಕಟೀಲು ಅವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ. ಶ್ಲೋಕ, ಭಗವದ್ಗೀತೆ ಮತ್ತು ಕಥೆ ಹೇಳುವುದನ್ನು ವಾಣಿ ಭಟ್ ಶಿರಸಿ ಅವರ ಬಳಿ ಕಲಿಯುತ್ತಿದ್ದು, ಭಜನೆಯನ್ನು ತನ್ನ ಅಮ್ಮನಿಂದಲೇ ಅಭ್ಯಸಿಸುತ್ತಿದ್ದಾಳೆ. ನೃತ್ಯ ತರಬೇತಿಯನ್ನು ನವೀನ್ ಕಿನ್ನಿಗೋಳಿ ಅವರ ಬಳಿ ಪಡೆಯುತ್ತಿದ್ದಾಳೆ. ಪ್ರತಿ ನಿತ್ಯವೂ ವಾಯ್ಸ್ ಆಫ್ ಆರಾಧನಾ ಸಂಸ್ಥೆಯು ಈಕೆಗೆ ಪ್ರೋತ್ಸಾಹದಾಯಕ ವೇದಿಕೆಯನ್ನು ಕಲ್ಪಿಸಿಕೊಡುವ ಮೂಲಕ ನಾಡಿನಾದ್ಯಂತ ಜನರು ಈಕೆಯನ್ನು ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.