ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪುತ್ತಿಗೆ-ಕಾಯರ್ಪುಂಡು ರಸ್ತೆಯಲ್ಲಿ ಭಾರಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಗೆ ಕಬ್ಬಿಣದ ಪೈಪ್ ಅಡ್ಡ ಇಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯರಾದ ವಲೇರಿಯನ್ ಸಿಕ್ವೇರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸವೀರ್ಸ್ ರಸ್ತೆಯನ್ನು ಪೂರ್ಣಗೊಳಿಸದೆ ಹಳೆ ರಸ್ತೆಯಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಘನ ವಾಹನಗಳು ಸಂಚಾರ ಮಾಡುತ್ತಿವೆ. ಇದರಿಂದಾಗಿ ರಸ್ತೆಯ ಡಾಂಬರು ಕಿತ್ತು ಮೇಲಕ್ಕೆ ಬಂದಿದ್ದು, ಸಂಪೂರ್ಣ ಹೊಂಡಗಳಾಗಿ ರಸ್ತೆಯು ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳೆ ರಸ್ತೆಯು ತೀವ್ರ ಇಳಿಜಾರಿನಿಂದ ಕೂಡಿದ್ದು, ಇಲ್ಲಿ ಬಸ್ಸುಗಳು ಹಾಗೂ ಇತರ ವಾಹನಗಳು ಸಂಚರಿಸುವಾಗ ಭಾರಿ ಅಡಚಣೆಯಾಗುತ್ತಿದೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಹೆಣ್ಣು ಮಕ್ಕಳು ಸಹಿತ ಹಲವಾರು ಮಂದಿ ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಕ್ಷಣ ಸವೀರ್ಸ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿ, ಹಳೆ ರಸ್ತೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯ ಮಧ್ಯೆ ಡಿ.ಬಿ.ಎಲ್ ಕಂಪನಿಯ ಬಾಲಾಜಿ ಅವರನ್ನು ಫೋನ್ ಕರೆಯ ಮೂಲಕ ಸಂಪರ್ಕಿಸಿ ಸ್ಥಳೀಯರು ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ಮುಂದಿನ ಎರಡು ವಾರದೊಳಗಾಗಿ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಕಂಪನಿಯ ಅಧಿಕಾರಿಗಳಿಂದ ಸಕಾರಾತ್ಮಕ ಭರವಸೆ ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.